ಲೆಬನಾನ್ನ ಉಗ್ರ ಸಂಘಟನೆ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸರುಲ್ಲಾಹ್ ಹತ್ಯೆ ಮಾಡಿದ ಬೆನ್ನಲ್ಲೇ ಲೆಬನಾನ್ ಮೇಲೆ ಭೂ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್, ತನ್ನ ಸೈನಿಕ ಹುತಾತ್ಮರಾಗಿರುವುದಾಗಿ ಪ್ರಕಟಿಸಿದೆ.
ಇದರೊಂದಿಗೆ ಭೂ ಸೇನಾ ಕಾರ್ಯಾಚರಣೆಯಲ್ಲಿ ತನ್ನ ಸೈನಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇದು ಹೆಜ್ಬುಲ್ಲಾವನ್ನು ಗುರಿಯಾಗಿಸಿ ಗಡಿ ದಾಟಿ ಅದರ ಪಡೆಗಳ ಮೇಲೆ ನಡೆಸುತ್ತಿರುವ ದಾಳಿಯಲ್ಲಿ ಸಂಭವಿಸಿದ ಇಸ್ರೇಲ್ ಪಡೆಯ ಮೊದಲ ಸಾವು ಎಂದು ವರದಿಯಾಗಿದೆ.
“22 ವರ್ಷದ ಕ್ಯಾಪ್ಟನ್ ಈಟಾನ್ ಇಟ್ಜಾಕ್ ಓಸ್ಟರ್ ಅವರು ಲೆಬನಾನ್ನಲ್ಲಿ ಯುದ್ದದ ಸಮಯದಲ್ಲಿ ಹುತಾತ್ಮರಾಗಿದ್ದಾರೆ” ಎಂದು ಇಸ್ರೇಲ್ ಮಿಲಿಟರಿ ಪ್ರಕಟಣೆಯಲ್ಲಿ ತಿಳಿಸಿದೆ.
ಲೆಬನಾನ್ ರಾಜಧಾನಿಯಲ್ಲಿ ಸೀಮಿತ ಮತ್ತು ಸ್ಥಳೀಯ ಭೂ ಆಕ್ರಮಣ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ ಬೆನ್ನಲ್ಲೇ ಮಂಗಳವಾರ ಬೆಳಗ್ಗೆ ಬೈರುತ್ನ ದಕ್ಷಿಣ ಉಪನಗರ ವ್ಯಾಪ್ತಿಯಲ್ಲಿ ಇಸ್ರೇಲ್ ಬೃಹತ್ ಪ್ರಮಾಣದ ದಾಳಿಗಳನ್ನು ಆರಂಭಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಇಸ್ರೇಲ್ ಗಡಿಯಲ್ಲಿ ವಾಸಿಸುವ ಜನರಿಗೆ ನೇರವಾಗಿ ಅಪಾಯವನ್ನುಂಟು ಮಾಡುವಂತಹ ಗಡಿಯ ಹತ್ತಿರದ ಹಳ್ಳಿಗಳಲ್ಲಿರುವ ನೆಲೆಗಳನ್ನು ಗುರಿಯಾಗಿಸಿ ಭೂ ಆಕ್ರಮಣ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಇಸ್ರೇಲಿ ರಕ್ಷಣಾ ಪಡೆ(ಐಡಿಎಫ್) ಹೇಳಿದೆ.