ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಅಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಜಾಮೀನಿನ ಮೇಲೆ ಹೊರಬರಲು ಎದುರು ನೋಡುತ್ತಿರುವ ದರ್ಶನ್ ವಿರುದ್ಧ ಶೀಘ್ರದಲ್ಲೇ ಮತ್ತೊಂದು ಆರೋಪಪಟ್ಟಿ ಸಲ್ಲಿಕೆ ಆಗಲಿದೆ. ಕೆಲ ದಿನಗಳ ಹಿಂದೆ ತೀವ್ರ ಸಂಚಲನ ಸೃಷ್ಟಿಸಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆ ಪ್ರಕರಣ ಸಂಬಂಧ ದರ್ಶನ್ ಹಾಗೂ ರೌಡಿಗಳ ವಿರುದ್ಧ ಶೀಘ್ರದಲ್ಲೇ ಪೊಲೀಸರು ಆರೋಪ ಪಟ್ಟಿ ಸಲ್ಲಿಸಲಿದ್ದಾರೆ. ವಿಶೇಷ ಸೌಲಭ್ಯ ಪಡೆದ ದರ್ಶನ್ ಹಾಗೂ ಇಬ್ಬರು ರೌಡಿಗಳ ವಿರುದ್ಧ ತನಿಖೆಯಲ್ಲಿ ಸಾಕಷ್ಟು ಪುರಾವೆ ಸಿಕ್ಕಿದ್ದು, ಈ ಕೃತ್ಯಕ್ಕೆ ಕಾರಾಗೃಹದ ಸಿಬ್ಬಂದಿ ಸಹಕರಿಸಿರುವುದು ಗೊತ್ತಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲ ಮಾಹಿತಿಯನ್ನು ಕ್ರೋಢೀಕರಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಮುಂದಾಗಿದ್ದಾರೆ. ಈ ಪ್ರಕರಣದ ತನಿಖೆ ಮುಕ್ತಾಯ ಹಂತ ತಲುಪಿದ್ದು ಪೊಲೀಸರು ಆರೋಪ ಪಟ್ಟಿ ಸಲ್ಲಿಕೆಗೆ ಅಂತಿಮ ಹಂತದ ತಯಾರಿ ನಡೆಸಿದ್ದಾರೆ. ಈ ಆರೋಪ ಪಟ್ಟಿಯ ಪರಾಮರ್ಶೆಗೆ ಕಾನೂನು ತಜ್ಞರಿಗೆ ನೀಡಲಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದ ಬಳಿಕ ಆರೋಪ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸೇರಿದ್ದ ದರ್ಶನ್ ಅವರು, ಆ ಜೈಲಿನಲ್ಲಿ ಅಕ್ರಮವಾಗಿ ವಿಶೇಷ ಸೌಲಭ್ಯ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಜೈಲಿನಲ್ಲಿ ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಜತೆ ಸಿಗರೇಟ್ ಕೈಯಲ್ಲಿ ಹಿಡಿದು ಟೀ ಕುಡಿಯುತ್ತ ಕುಳಿತ್ತಿದ್ದ ಪೋಟೋ ಬಹಿರಂಗವಾಗಿತ್ತು. ಅಲ್ಲದೆ ರೌಡಿ ಧರ್ಮನ ಸಹಚರನ ಜತೆ ಮೊಬೈಲ್ನಲ್ಲಿ ಮಾತನಾಡಿ ವಿಡಿಯೋ ವೈರಲ್ ಆಗಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು. ಇದು ದರ್ಶನ್ ಗೆ ಸಂಕಷ್ಟ ತಂದೊಡ್ಡಿತ್ತು.