ಬಾಲಿವುಡ್ ನಟ ಗೋವಿಂದ ಕಾಲಿಗೆ ತಮ್ಮದೇ ಗನ್ ನಿಂದ ಮಿಸ್ ಫೈಯರ್ ಆಗಿದ್ದು ಸದ್ಯ ಚೇರತಿಸಿಕೊಳ್ಳುತ್ತಿದ್ದಾರೆ. ಪಿಸ್ತೂಲ್ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಬುಲೆಟ್ ಕಾಲಿಗೆ ತಗುಲಿದೆ ಅಂತ ಗೋವಿಂದ ಪೊಲೀಸರ ಬಳಿ ಹೇಳಿದ್ದಾರೆ. ಆದ್ರೆ ಗೋವಿಂದ್ ಹೇಳಿಕೆ ಪೊಲೀಸರಿಗೆ ಸಮಾಧಾನ ತಂದಿಲ್ಲ. ಬೇರೇನೋ ನಡೆದಿದೆ ಎಂದು ಅನುಮಾನ ಶುರುವಾಗಿದ್ದು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಗೋವಿಂದ್ ಮತ್ತೆ ಸುದ್ದಿಯಾಗಿರೋದು ಅವರ ಮೂಢನಂಬಿಕೆಗಳಿಂದಾಗಿ.
ಮುಂಬೈನಲ್ಲಿ ಜನಿಸಿದ ಗೋವಿಂದ 1980ರ ದಶಕದ ಕೊನೆಯಲ್ಲಿ ಮತ್ತು 1990ರ ದಶಕದ ಆರಂಭದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದವರಲ್ಲಿ ಒಬ್ಬರು. ನಾಲ್ಕು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ 165ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಮಾರ್ಚ್ನಲ್ಲಿ, ಲೋಕಸಭೆ ಚುನಾವಣೆಗೆ ಒಂದು ತಿಂಗಳ ಮೊದಲು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ್ದರು. ಸುಮಾರು ಎರಡು ದಶಕಗಳ ನಿವೃತ್ತ ಜೀವನದ ನಂತರ ಗೋವಿಂದ ಮತ್ತೆ ಹಾಗೆ ರಾಜಕೀಯ ಕ್ಷೇತ್ರಕ್ಕೆ ಮರು ಪ್ರವೇಶ ಮಾಡಿದ್ದರು. 2004ರ ಚುನಾವಣಾ ಯುದ್ಧದಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ನಲ್ಲಿ ಗೆದ್ದಿದ್ದ ಈತ 2008ರಲ್ಲಿ ರಾಜಕೀಯದಿಂದ ಹಿಂದೆ ಸರಿದಿದ್ದರು.
ಗೋವಿಂದ ಅವರು ತಮ್ಮ ವೃತ್ತಿಜೀವನವನ್ನು ‘ಇಲ್ಜಾಮ್’ ಚಿತ್ರದೊಂದಿಗೆ ಪ್ರಾರಂಭಿಸಿದರು. ಅದು ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಯಿತು. ಆ ನಂತರ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. 90ರ ದಶಕವು ಗೋವಿಂದ್ಗೆ ಗೋಲ್ಡನ್ ಎರಾ. ಅವರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಅವರ ನಟನೆಯ ‘ಹೀರೋ ನಂಬರ್ ಒನ್’, ‘ಕೂಲಿ ನಂಬರ್ ಒನ್’, ‘ದುಲ್ಹೆ ರಾಜ’, ‘ಬಡೇ ಮಿಯಾ ಛೋಟೆ ಮಿಯಾ, ‘ಸ್ವರ್ಗ’, ‘ನಸೀಬ್’ ಮುಂತಾದ ಅನೇಕ ಸೂಪರ್ಹಿಟ್ ಆದವು. ಗೋವಿಂದ ಕೊನೆಯದಾಗಿ 2019ರಲ್ಲಿ ‘ರಂಗಿಲಾ ರಾಜ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಗೋವಿಂದ ಅವರಿಗೆ ಎಷ್ಟು ಬೇಡಿಕೆಯಿತ್ತು ಎಂದರೆ ಅವರು ಒಂದೇ ಬಾರಿಗೆ 5-6 ಚಿತ್ರಗಳಿಗೆ ಸಹಿ ಹಾಕುತ್ತಿದ್ದರು. ಹಾಗೆ ಮಾಡಿದ ಮೊದಲ ಸ್ಟಾರ್ ಗೋವಿಂದ. ನಟನಿಗೆ ತುಂಬಾ ಕೆಲಸ ಇತ್ತು, ಅವರು ದಿನಕ್ಕೆ ಹಲವು ಪಾಳಿಗಳಲ್ಲಿ ಶೂಟಿಂಗ್ ಮಾಡುತ್ತಿದ್ದರು. ಗೋವಿಂದ 14 ವರ್ಷಗಳ ಕಾಲ ಬಾಲಿವುಡ್ಅನ್ನು ಆಳಿದರು. ಹಿಂದಿ ಚಿತ್ರರಂಗಕ್ಕೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಒಟ್ಟಿಗೆ ಹಲವಾರು ಚಿತ್ರಗಳಿಗೆ ಸಹಿ ಮಾಡಿದ ನಂತರ, ಅವರು ಸೆಟ್ಗಳಿಗೆ ಗಂಟೆಗಟ್ಟಲೆ ತಡವಾಗಿ ಬರಲು ಪ್ರಾರಂಭಿಸಿದರು. ಇಷ್ಟೇ ಅಲ್ಲ, ಗೋವಿಂದ ಅವರು ಚಿತ್ರದಲ್ಲಿ ನಾಯಕನಾಗಿ ಮಾತ್ರ ನಟಿಸುವುದಾಗಿ ನಿರ್ಮಾಪಕರಿಂದ ಬೇಡಿಕೆಯಿಡಲು ಪ್ರಾರಂಭಿಸಿದರು.
ಸಾಕಷ್ಟು ವರ್ಷಗಳ ಕಾಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ ಗೋವಿಂದನ ಇಳಿಮುಖ ಗಮನ 2000ರ ದಶಕದಲ್ಲಿ ಪ್ರಾರಂಭವಾಯಿತು. ಕಳೆದ ದಶಕದಲ್ಲಿ ಗೋವಿಂದ ಕೆಲವೇ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಬಾಲಿವುಡ್ ತಜ್ಞ ಕೋಮಲ್ ನಹ್ತಾ ಸಂದರ್ಶನವೊಂದರಲ್ಲಿ, ಗೋವಿಂದನ ಅವನತಿಗೆ ಆತನ ಮೂಢನಂಬಿಕೆಗಳು, ಇಂಥ ವಿಚಾರಗಳಲ್ಲಿ ಮೋಸಹೋಗುವಿಕೆಯೇ ಕಾರಣವಾಯಿತು ಎಂದಿದ್ದರು. ನಿರ್ಮಾಪಕ ಪಹ್ಲಾಜ್ ನಿಹಲಾನಿ ಕೂಡ ಈ ಕುರಿತು ಮಾತನಾಡಿದ್ದರು.
ಗೋವಿಂದನಿಗೆ ಹಲವು ಮೂಢನಂಬಿಕೆಗಳಿದ್ದವು. ಜೊತೆಗೆ ಆಗಾಗ ಜ್ಯೋತಿಷಿಗಳೋ ಕಪಟ ವಾಸ್ತು ತಜ್ಞರೋ ಹೇಳಿದ ಮಾತುಗಳನ್ನು ಕೇಳಿಕೊಂಡು ಶೂಟಿಂಗ್ ಸೆಟ್ಗೆ ಬಂದುಬಿಡುತ್ತಿದ್ದ. ಯಾರೋ ತಲೆ ಕೆಟ್ಟ ಜ್ಯೋತಿಷಿಯೊಬ್ಬ “ಒಂದು ಪೆನ್ನಿಂದ ನಿನಗೆ ವಿನಾಶ ಇದೆ” ಎಂದು ಹೇಳಿದ್ದ. ಇದನ್ನು ನಂಬಿಕೊಂಡಿದ್ದ. ಆಗ “ಜೀತೋ ಚಪ್ಪಡ್ ಫಡ್ ಕೆ” ಎಂಬ ಗೇಮ್ ಶೋ ನಡೆಯುತ್ತಿತ್ತು. ಅದರ ಶೂಟಿಂಗ್ ಸೆಟ್ಟುಗಳಲ್ಲಿ ಅವನು ಪೆನ್ನುಗಳನ್ನು ನಿಷೇಧಿಸಿಯೇಬಿಟ್ಟ. ಬಹುಶಃ ಆ ಜ್ಯೋತಿಷಿ ʼಪತ್ರಕರ್ತರು ನಿನ್ನ ಬಗ್ಗೆ ಕೆಟ್ಟದ್ದು ಬರೆಯಬಹುದುʼ ಎಂಬರ್ಥದಲ್ಲಿ ಹೇಳಿದ್ದಿರಬಹುದು. ಆದರೆ ಅದನ್ನು ಗೋವಿಂದ ಅಕ್ಷರಾರ್ಥದಲ್ಲಿ ತೆಗೆದುಕೊಂಡ. ಪತ್ರಕರ್ತರನ್ನೂ ಪೆನ್ನುಗಳೊಂದಿಗೆ ತನ್ನ ಬಳಿಗೆ ಬರಲು ಬಿಡಲಿಲ್ಲ. ಸೆಟ್ಗೆ ಯಾರಾದರೂ ಭೇಟಿ ನೀಡಲು ಬಂದರೆ ಪೆನ್ನುಗಳನ್ನು ಹೊರಗೇ ಇಟ್ಟು ಬರುವಂತೆ ಸೂಚನೆ ನೀಡುತ್ತಿದ್ದ.
ಕ್ರಮೇಣ ಗೋವಿಂದನ ಮೌಢ್ಯಗಳು ಹೆಚ್ಚುತ್ತಲೇ ಹೋದವು. ಆತ ಯಾವಾಗಲೂ ಇಂಥ ವಿಷಯಗಳಲ್ಲಿ ಮೋಸಹೋಗುತ್ತಲೇ ಇದ್ದ. ಇದ್ದಕ್ಕಿದ್ದಂತೆ, ಸೆಟ್ನಲ್ಲಿ ಮೇಲೆ ತೂಗುಹಾಕಿದ್ದ ಬಲ್ಬ್ಗಳ ಗೊಂಚಲು ಬೀಳಲಿದೆ ಎನ್ನುತ್ತಿದ್ದ. ಥಟ್ಟನೆ ಬಂದು ಎಲ್ಲರನ್ನೂ ಪಕ್ಕಕ್ಕೆ ಸರಿಯಲು ಹೇಳುತ್ತಿದ್ದ. ಕೆಲವೊಮ್ಮೆ ತಾನೇ ಪ್ರವಾದಿಯಂತೆ ಏನೋ ಹೇಳುತ್ತಿದ್ದ. ಖಾದರ್ ಖಾನ್ ನಷ್ಟಹೊಂದುತ್ತಾನೆ ಭವಿಷ್ಯ ನುಡಿದಿದ್ದ. ಬಟ್ಟೆ ಬದಲಾಯಿಸಿ ಬರುವಂತೆ ಸೆಟ್ನಲ್ಲಿದ್ದವರಿಗೆ ತಾಕೀತು ಮಾಡುತ್ತಿದ್ದ. ಕೆಲವು ದಿನಗಳಲ್ಲಿ ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡಲು ನಿರಾಕರಿಸುತ್ತಿದ್ದ. ಕೆಲವು ವಾರಗಳಲ್ಲಿ ಸಂಬಂಧಿತ ಬಣ್ಣದ ಬಟ್ಟೆಗಳನ್ನು ಧರಿಸುತ್ತಿರಲಿಲ್ಲ; ಚಿತ್ರಕ್ಕೆ ಅಗತ್ಯವಾದರೂ ಧರಿಸಲು ನಿರಾಕರಿಸುತ್ತಿದ್ದ. ಕೆಲವು ಬಣ್ಣಗಳನ್ನು ನಿರ್ದಿಷ್ಟ ದಿನ ಕಡ್ಡಾಯವಾಗಿ ಧರಿಸುತ್ತಿದ್ದ. ಕುದುರೆಗಳನ್ನು ಏರಿ ಸವಾರಿ ಮಾಡುವ, ವಾಹನ ಚಲಾಯಿಸುವ ದೃಶ್ಯಗಳ ಬಗ್ಗೆ ಅವನದೇ ಮೌಢ್ಯಗಳಿದ್ದವು. ಇವೆಲ್ಲವೂ ನಿರ್ದೇಶಕರು, ನಿರ್ಮಾಪಕರಿಗೆ ಅವನ ಬಗ್ಗೆ ಜಿಗುಪ್ಸೆ ಮೂಡಲು ಕಾರಣವಾಗಿದ್ದವು.