ವಿಶ್ವದ ಎಲ್ಲ ರಾಷ್ಟ್ರಗಳು ಪೋಲಿಯೊ ರೋಗದಿಂದ ಮುಕ್ತವಾಗಿದ್ದರೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಾತ್ರ ಇನ್ನೂ ಈ ರೋಗದಿಂದ ಹೊರಬಂದಿಲ್ಲ. ಎರಡು ರಾಷ್ಟ್ರಗಳಲ್ಲಿ ಪೋಲಿಯೊ ಪ್ರಕರಣಗಳು ಹಠಾತ್ ಏರಿಕೆ ಕಾಣುತ್ತಿದ್ದು ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಸದ್ಯ ಪಾಕ್ನಲ್ಲಿ 26, ಅಫ್ಘಾನಿಸ್ತಾನದಲ್ಲಿ 20ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ.
ಇತ್ತೀಚೆಗೆ ಪಾಕಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಎರಡು ಮತ್ತು ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಎರಡು ಪೋಲಿಯೊ ಪ್ರಕರಣಗಳು ವರದಿಯಾಗಿವೆ. ರೋಗವನ್ನು ನಿರ್ಮೂಲನೆ ಮಾಡುವ ಜಾಗತಿಕ ಪ್ರಯತ್ನಗಳಿಗೆ ಇದು ಸವಾಲಾಗಿದೆ. ಇತ್ತ, ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್ಒ) ಎರಡು ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಪೋಲಿಯೊ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಅಫ್ಘಾನಿಸ್ತಾನದಲ್ಲಿ ಪೋಲಿಯೊ ಉಲ್ಬಣಿಸುತ್ತಿದ್ದರೂ, ಅಲ್ಲಿನ ತಾಲಿಬಾನ್ ಸರ್ಕಾರ ಲಸಿಕೆ ನೀಡುವುದನ್ನು ನಿಷೇಧಿಸಿದೆ. ಹೀಗಾಗಿ ಪೋಲಿಯೊ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ಮೂರು ಹೊಸ ಪೋಲಿಯೊ ಪ್ರಕರಣಗಳನ್ನು ಡಬ್ಲ್ಯುಎಚ್ಒ ದೃಢಪಡಿಸಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
WHOದ ಪ್ರಾದೇಶಿಕ ನಿರ್ದೇಶಕ ಡಾ.ಅಹ್ಮದ್ ಅಲ್-ಮಂಧಾರಿ ಪ್ರತಿಕ್ರಿಯಿಸಿ, “ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ರಾಷ್ಟ್ರಗಳು ಪೋಲಿಯೊ ನಿರ್ಮೂಲನೆಗೆ ಒಟ್ಟಾಗಿ ಕೆಲಸ ಮಾಡಬೇಕಿದೆ. ಪ್ರಸರಣವನ್ನು ತಗ್ಗಿಸಲು ದ್ವಿಪಕ್ಷೀಯವಾಗಿ ಶ್ರಮಿಸಬೇಕಿದೆ. ಆದರೆ, ಉಭಯ ರಾಷ್ಟ್ರಗಳ ಮಧ್ಯೆ ರಾಜಕೀಯ ತಿಕ್ಕಾಟದಿಂದಾಗಿ ಈ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮಧ್ಯೆ ವೈದ್ಯಕೀಯ ಸಹಕಾರಗಳು ಬಂದ್ ಆಗಿವೆ. ಇದು ಇನ್ನಷ್ಟು ಸಮಸ್ಯೆ ಉಂಟುಮಾಡಲಿದೆ” ಎಂದು ತಿಳಿಸಿದ್ದಾರೆ.