ಸಿನಿಮಾ ರಂಗದ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ರಾಜಕೀಯದತ್ತ ಮುಖ ಮಾಡಿದ ನಟಿ ರಮ್ಯಾ ಮಂಡ್ಯ ಸಂಸದೆಯಾಗಿ, ಬಳಿಕ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಚುನಾವಣೆ ಎದುರಿಸಿ ಸೋತಿದ್ದರು. ಸಿನಿಮಾ ರಂಗ ಕೈ ಹಿಡಿದಂತೆ ರಾಜಕೀಯ ಆಕೆಯ ಕೈ ಹಿಡಿಯಲಿಲ್ಲ. ಆದರೂ ರಮ್ಯಾ ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇದೀಗ ರಾಜಕೀಯ ಜೀವನದಲ್ಲಿ ತಮ್ಮ ಮೇಲೆ ಪ್ರಭಾವ ಭೀರಿದ ವ್ಯಕ್ತಿಯನ್ನು ರಮ್ಯಾ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಂಡಿದ್ದಾರೆ.
ತಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕವಾಗಿದ್ದು, ನಾನು ರಾಜಕೀಯಕ್ಕೆ ಎಂಟ್ರಿಯಾದ ಸಮಯದಲ್ಲಿಯೇ ನನ್ನ ತಂದೆ ತೀರಿಕೊಂಡರು. ಅದು ನನ್ನನ್ನು ಇನ್ನಿಲ್ಲದಂತೆ ಕಾಡಿತು. ಅದಾದ ಬಳಿಕ ನಾನು ಚುನಾವಣೆಯಲ್ಲಿ ಸೋತೆ ಅದು ನನ್ನ ಪಾಲಿಗೆ ಬಹಳ ಕಷ್ಟದ ಸಮಯ. ನನ್ನ ತಂದೆ ಹೋದ ಸಮಯದಲ್ಲಿ ಅಂತೂ ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ರಮ್ಯಾ ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಆದರೆ ಆ ಸಮಯದಲ್ಲಿ ರಾಹುಲ್ ಗಾಂಧಿ ಜೀ ಅವರು ನನಗೆ ಬಹಳ ಸಹಾಯ ಮಾಡಿದರು. ನನ್ನಲ್ಲಿ ಹೊಸ ಚೈತನ್ಯ ತುಂಬುವ ಯತ್ನ ಮಾಡಿದರು. ಹುಟ್ಟು-ಸಾವುಗಳ ಬಗ್ಗೆ ತಿಳಿಸಿಕೊಟ್ಟರು. ನಮ್ಮ ಜೀವನದ ಉದ್ದೇಶದ ಬಗ್ಗೆ ಪಾಠ ಮಾಡಿದರು. ನನ್ನ ಜೀವನದಲ್ಲಿ ನನ್ನ ತಾಯಿ, ತಂದೆಯ ಬಳಿಕ ನನ್ನ ಮೇಲೆ ಅತಿಯಾಗಿ ಪ್ರಭಾವ ಬೀರಿದ ವ್ಯಕ್ತಿ ರಾಹುಲ್ ಗಾಂಧಿ ಎಂದು ನಟಿ ರಮ್ಯಾ ಹೇಳಿದ್ದಾರೆ.
ನಾನು ಮೊದಲು ಪಾರ್ಲಿಮೆಂಟ್ಗೆ ಹೋದಾಗ ನನಗೆ ಏನೂ ಗೊತ್ತಿರಲಿಲ್ಲ. ನಾನು ಕಲಿತೆ, ಇದಕ್ಕೆ ಮಂಡ್ಯ ಜನತೆಗೆ ಥ್ಯಾಂಕ್ಸ್ ಹೇಳಬೇಕು. ಮಂಡ್ಯ ಜನರು ಇಲ್ಲ ಅಂದಿದ್ರೆ ನನಗೆ ಆ ಧೈರ್ಯ ಬರ್ತಿರಲಿಲ್ಲ. ಪೊಲಿಟಿಕಲ್ ಕಮ್ಯುನಿಕೇಶನ್ ತುಂಬಾ ಕಷ್ಟ. ಮನನರಂಜನೆ ತುಂಬಾ ಸುಲಭ. ನ್ಯೂಸ್ ಹಿಂದೆ ಬೀಳುವುದು ಕಷ್ಟ. ನಾವು 24*7 ನ್ಯೂಸ್ ಚಾನೆಲ್ ಥರಾ ಕೆಲಸ ಮಾಡುತ್ತಿದ್ದೆವು ಎಂದು ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯ ದಿನಗಳನ್ನು ನೆನಪಿಸಿಕೊಂಡು ಪಕ್ಷ ಹಾಗೂ ತಂಡಕ್ಕೆ ಧನ್ಯವಾದ ತಿಳಿಸಿದರು.