ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇದರ ಜೊತೆಗೆ ಅವರ ನ್ಯಾಯಾಂಗ ಬಂಧನದ ಅವಧಿ ಕೂಡ ಇಂದಿಗೆ ಪೂರ್ಣಗೊಳ್ಳಲಿದೆ. ಒಂದೊಮ್ಮೆ ನ್ಯಾಯಾಂಗ ಬಂಧನ ವಿಸ್ತರಣೆಯಾದರೆ ದರ್ಶನ್ ಬೆಂಗಳೂರಿಗೆ ಶಿಫ್ಟ್ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನೂರು ದಿನಗಳ ಸೆರೆವಾಸ.. ಇದು ನಟ ದರ್ಶನ್ ದಿನಚರಿ.. ಬಳ್ಳಾರಿ ಕಾರಾಗೃಹದಲ್ಲಿ 36 ದಿನಗಳನ್ನ ಕಳೆದಿರೋ ದಾಸನಿಗೆ ಒಂದೊಂದು ದಿನವೂ ಯುಗವಾಗಿಬಿಟ್ಟಿದೆ. ಸೆಪ್ಟೆಂಬರ್ 30ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಇಂದಿಗೆ ವಿಚಾರಣೆ ಮುಂದೂಡಿತ್ತು. ಸತತ 8 ಬಾರಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿದ್ದು ನಾಳೆ ಬೇಲ್ ಸಿಗುತ್ತೋ, ಇಲ್ವೋ ಅಂತ ದರ್ಶನ್ ಚಡಪಡಿಸ್ತಿದ್ದಾರೆ ಎನ್ನಲಾಗಿದೆ. ನಿನ್ನೆಯಿಂದ ನವರಾತ್ರಿ ಕೂಡ ಆರಂಭವಾಗಿದ್ದು ಜೈಲಿನಲ್ಲೇ ಹಬ್ಬ ಆಚರಿಸುವಂತಾಗಿದೆ. ಬೆನ್ನುನೋವು, ಕೈ ಮೂಳೆಯ ನೋವಿನಿಂದ ಬಳಲುತ್ತಿದ್ದು ಜೈಲಿನ ಪೆಸಿಲಿಟಿಗಳು ಸಿಗದೇ ಕಾಟೇರ ಹೈರಾಣಾಗಿದ್ದಾರೆ.
ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ನಿನ್ನೆ ಬಳ್ಳಾರಿ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಇದೇ ಮೊದಲ ಬಾರಿಗೆ ಪುತ್ರ ವಿನೇಶ್ ಭೇಟಿ ನೀಡಿದ್ದಾರೆ. ವಿಜಯಲಕ್ಷ್ಮಿ 7ನೇ ಬಾರಿಗೆ ಬಳ್ಳಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ.
ದರ್ಶನ್ಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿದೆ. ಬೆನ್ನಿನಲ್ಲಿ ಊತ ಇದ್ದು, ವಿಮ್ಸ್ ವೈದ್ಯರು ಸ್ಕ್ಯಾನಿಂಗ್ಗೆ ಸಲಹೆ ನೀಡಿದ್ದಾರೆ. ದರ್ಶನ್ ಅವರು ಬೆಂಗಳೂರಿನಲ್ಲೇ ತಪಾಸಣೆ ಮಾಡಿಸೋದಾಗಿ ಹಠ ಹಿಡಿದಿದ್ದಾರೆ. ಸದ್ಯಕ್ಕೆ ನೋವು ನಿವಾರಕ ಮಾತ್ರೆ ಕೊಡಿ ಸಾಕು ಎಂದು ದರ್ಶನ್ ಹೇಳುತ್ತಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಬರೋಬ್ಬರಿ 17 ಮಂದಿ ಅರೆಸ್ಟ್ ಆಗಿದ್ದು, ಈ ಪೈಕಿ ಮೂವರಿಗೆ ಜಾಮೀನು ಸಿಕ್ಕಿದೆ. ಉಳಿದವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ದರ್ಶನ್ ಹಾಗೂ ಪವಿತ್ರಾ ಸೇರಿದಂತೆ ಎಲ್ಲರೂ ಜಾಮೀನಿಗಾಗಿ ಚಾತಕಪಕ್ಷಿಯಂತೆ ಕಾದಿದ್ದಾರೆ.