ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನೀಕಾಂತ್ ನಿನ್ನೆ ತಡರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೆಪ್ಟೆಂಬರ್ 30 ರಂದು ರಜನಿಕಾಂತ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಸೂಕ್ತ ಚಿಕಿತ್ಸೆ ಹಾಗೂ ವಿಶ್ರಾಂತಿಯ ಬಳಿಕ ನಿನ್ನೆ (ಅಕ್ಟೋಬರ್ 03) ರಾತ್ರಿ 11 ಗಂಟೆ ವೇಳೆಗೆ ಮನೆ ಸೇರಿದ್ದಾರೆ. ರಜನೀಕಾಂತ್ ಡಿಸ್ಚಾರ್ಜ್ ಆಗಿರುವ ಮಾಹಿತಿಯನ್ನು ಚೆನ್ನೈ ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 30 ರಂದು ರಜನೀಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು, ಅವರನ್ನು ಪರೀಕ್ಷೆಗೆ ಒಳಪಡಿಸಿದ್ದ ವೈದ್ಯರು, ರಜನೀಕಾಂತ್ರ ಹೃದಯದಲ್ಲಿ ಸಮಸ್ಯೆ ಉಂಟಾಗಿರುವುದನ್ನು ಪತ್ತೆ ಹಚ್ಚಿದ್ದರು. ರಜನೀಕಾಂತ್ರ ಹೃದಯದ ದೊಡ್ಡ ನಾಳದಲ್ಲಿ ಊತ ಬಂದಿತ್ತು, ಅದು ಹೆಚ್ಚಾಗಿ ರಕ್ತನಾಳವೇ ಒಡೆಯುವ ಅಪಾಯವಿತ್ತು, ಹಾಗಾಗಿ ಅಪೋಲೊ ಆಸ್ಪತ್ರೆ ವೈದ್ಯರು ಊದಿಕೊಂಡಿದ್ದ ರಕ್ತನಾಳಕ್ಕೆ ಸ್ಟಂಟ್ ಅಳವಡಿಸಿದ್ದರು. ಈ ಕ್ರಿಯೆಯನ್ನು ಶಸ್ತ್ರಚಿಕಿತ್ಸೆ ಇಲ್ಲದೆಯೇ ವೈದ್ಯರು ಮಾಡಿದ್ದರು.
ಸ್ಟಂಟ್ ಅಳವಡಿಕೆ ಬಳಿಕ ಐಸಿಯುನಲ್ಲಿರಿಸಿ ಅವರ ಹೃದಯದ ಕಾರ್ಯ, ಒಟ್ಟಾರೆ ದೇಹದ ಆರೋಗ್ಯದ ಮೇಲೆ ನಿಗಾವಹಿಸಿದ್ದ ವೈದ್ಯರು, ಅಕ್ಟೋಬರ್ 03 ರ ರಾತ್ರಿ 11 ಗಂಟೆಗೆ ಅವರನ್ನು ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ. ಸ್ಟಂಟ್ ಅಳವಡಿಸಿರುವ ಕಾರಣ ಕೆಲವು ದಿನಗಳ ಕಾಲ ರಜನೀಕಾಂತ್ಗೆ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗುತ್ತಿದೆ. ರಜನೀಕಾಂತ್ ಪ್ರಸ್ತುತ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಮತ್ತೆ ಚಿತ್ರೀಕರಣಕ್ಕೆ ಬರಲು ತುಸು ಹೆಚ್ಚು ದಿನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ರಜನೀಕಾಂತ್ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಅವರ ಅಭಿಮಾನಿಗಳು ಆತಂಕಿತರವಾಗಿದ್ದರು. ಸ್ವತಃ ಪ್ರಧಾನಿ ಮೋದಿ, ರಜನೀಕಾಂತ್ರ ಪತ್ನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ರಜನೀಕಾಂತ್ರ ಪುತ್ರಿ ಸೌಂದರ್ಯ ರಜನೀಕಾಂತ್, ತಿರುವತ್ತಿಯೂರ್ ಶ್ರೀ ವಾದಿವುದೈ ದೇವಾಲಯಕ್ಕೆ ಭೇಟಿ ಮಾಡಿ, ಅಪ್ಪನ ಶೀಘ್ರ ಗುಣಮುಖ ಕೋರಿ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ತಮಿಳುನಾಡಿನ ರಾಜ್ಯಪಾಲರು ‘ಜಗತ್ತಿನಾದ್ಯಂತ ಇರುವ ರಜನಿಕಾಂತ್ ಅವರ ಕೋಟ್ಯಂತರ ಅಭಿಮಾನಗಳ ಜೊತೆಗೆ ನಾನು ನಿಂತಿದ್ದೇನೆ, ರಜನೀಕಾಂತ್ ಅವರ ಕ್ಷಿಪ್ರ ಮತ್ತು ಸುಗಮ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ’ ಎಂದಿದ್ದರು.
ರಜನೀಕಾಂತ್ ನಟನೆಯ ‘ವೇಟ್ಟೈಯಾನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಜನೀ ಜೊತೆಗೆ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಇನ್ನೂ ಕೆಲವು ಸ್ಟಾರ್ ನಟರು ನಟಿಸಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ನಟಿಸಲು ರಜನೀಕಾಂತ್ ಒಪ್ಪಿಕೊಂಡಿದ್ದು, ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಆಸ್ಪತ್ರೆಗೆ ದಾಖಲಾಗಿದ್ದರು.