ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆಯಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಈ ಬೆನ್ನಲ್ಲೇ ರಜನಿಕಾಂತ್ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ರಜನೀಕಾಂತ್ ರ ಹೊಸ ಸಿನಿಮಾ ‘ವೆಟ್ಟೆಯಾನ್’ ವಿರುದ್ಧ ದೂರು ದಾಖಲಾಗಿದೆ.
‘ವೆಟ್ಟೆಯಾನ್’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟ್ರೈಲರ್ನಲ್ಲಿ ಕೇಳಿ ಬರುವ ಕೆಲ ಸಂಭಾಷಣೆಗಳ ವಿರುದ್ಧ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿದ್ದಾರೆ. ಟ್ರೈಲರ್ ನಲ್ಲಿ ಬಳಸಲಾಗಿರುವ ಕೆಲವು ಸಂಭಾಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಲನಿವೇಲುಸ್ವಾಮಿ ಎಂಬುವರು ಹೈಕೋರ್ಟ್ನ ಮಧುರೈ ಬೆಂಚ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು, ‘ವೆಟ್ಟೆಯಾನ್’ ಸಿನಿಮಾದಲ್ಲಿ ಬಳಸಲಾಗಿರುವ ಎನ್ಕೌಂಟರ್ ಕುರಿತಾದ ಸಂಭಾಷಣೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಮನವಿ ಮಾಡಿದ್ದರು. ಸಿನಿಮಾದ ಟ್ರೈಲರ್ನಲ್ಲಿ ನಾಯಕ ಎನ್ಕೌಂಟರ್ ಕುರಿತಾಗಿ ಹೀರೋಯಿಕ್ ಸಂಭಾಷಣೆಗಳನ್ನು ಹೇಳುವ ದೃಶ್ಯಗಳಿವೆ. ಈ ದೃಶ್ಯಗಳು ಹಾಗೂ ಸಂಭಾಷಣೆಗಳ ಬಗ್ಗೆ ಪಲನಿವೇಲುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಸಿನಿಮಾದಲ್ಲಿ ಅಕ್ರಮ ಚಟುವಟಿಕೆಯಾದ ಎನ್ಕೌಂಟರ್ಗೆ ಒತ್ತು ನೀಡುವ, ಎನ್ಕೌಂಟರ್ ಅನ್ನು ಸರಿಯೆಂದು ವಾದಿಸುವ ಸಂಭಾಷಣೆಗಳಿವೆ. ಇದು ಸಮಾಜಕ್ಕೆ ಮಾರಕವಾಗಿದ್ದು, ಈ ಸಿನಿಮಾ ಬಿಡುಗಡೆ ಆದರೆ ಜನರ ಮನಸ್ಸಿನಲ್ಲಿ ಎನ್ಕೌಂಟರ್ಗಳು ಸರಿಯೆಂಬ ಭಾವನೆ ಜನರ ಮನಸಿನಲ್ಲಿ ಮೂಡಲಿದೆ. ಹಾಗಾಗಿ ಈ ಸಿನಿಮಾದಲ್ಲಿರುವ ಎನ್ಕೌಂಟರ್ ಕುರಿತಾದ ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ನಿರ್ಮಾಣಸಂಸ್ಥೆಗೆ ಸೂಚಿಸಬೇಕು, ಇಲ್ಲವಾದರೆ ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು, ಸಿಬಿಎಫ್ಸಿ ಹಾಗೂ ಸಿನಿಮಾ ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ ಹೌಸ್ಗೆ ನೊಟೀಸ್ ಜಾರಿ ಮಾಡಿದೆ. ಆದರೆ ಸಿನಿಮಾದ ಬಿಡುಗಡೆ ಮೇಲೆ ತಾತ್ಕಾಲಿಕ ತಡೆ ನೀಡಲು ಪೀಠವು ನಿರಾಕರಿಸಿದೆ. ಸಿಬಿಎಫ್ಸಿ ಹಾಗೂ ಲೈಕಾ ಪ್ರೊಡಕ್ಷನ್ ಹೌಸ್ನ ಪ್ರತಿಕ್ರಿಯೆ ಬಂದ ಬಳಿಕ ಈ ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ.