ಕನ್ನಡ ಸಿನಿಮಾ ರಂಗದ ಖ್ಯಾತ ನಟ, ರೆಬಲ್ ಸ್ಟಾರ್ ಅಂತಾನೇ ಫೇಮಸ್ ಆಗಿರುವ ಅಂಬರೀಶ್ (Ambarish) ಅವರ ಸ್ಮಾರಕವನ್ನು (memorial) ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಸಂಜೆ 6 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ. ಹಲವು ವರ್ಷಗಳ ಅಂಬರೀಶ್ ಅಭಿಮಾನಿಗಳ ಕನಸು ಇಂದು ನನಸಾಗುತ್ತಿದೆ.
ಕೇವಲ ಸ್ಮಾರಕ ಮಾತ್ರವಲ್ಲ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ (Race Course Road) ಅಂಬರೀಶ್ ಅವರ ಹೆಸರನ್ನು ಇಡುವುದಾಗಿ ಈ ಹಿಂದೆ ಸಿಎಂ ಘೋಷಿಸಿದ್ದರು. ಅದರಂತೆ ಇಂದು ಸಂಜೆ 5 ಗಂಟೆಗೆ ಶಿವಾಜಿನಗರ ಕ್ಷೇತ್ರಕ್ಕೆ ಒಳಪಡುವ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಈ ಸಮಾರಂಭವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಉದ್ಘಾಟಿಸಲಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕ ತಲೆಯೆತ್ತಿದೆ. ವಿಶೇಷ ವಿನ್ಯಾಸದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗದೆ. ಅಸಂಖ್ಯಾತ ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿರುವ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ತೋಟಗಾರಿಕಾ ಸಚಿವ ಮುನಿರತ್ನ, ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ (Sumalatha Ambarish), ಪುತ್ರ ಅಭಿಷೇಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಡಾ.ರಾಜ್ ಕುಮಾರ್ ಸ್ಮಾರಕದ ಕೂಗಳತೆಯಲ್ಲಿಯೇ ಅಂಬರೀಶ್ ಸ್ಮಾರಕವಿದೆ. ಒಂದು ಕಡೆ ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸಮಾಧಿ ಇದ್ದು, ಪಕ್ಕದಲ್ಲೇ ಅಂಬರೀಶ್ ಸ್ಮಾರಕ ತಲೆಯೆತ್ತಿದೆ. ಅಲ್ಲದೇ ಕೆಲವೇ ತಿಂಗಳಲ್ಲಿ ಪುನೀತ್ ರಾಜ್ ಕುಮಾರ್ ಸ್ಮಾರಕಕ್ಕೂ ಸರಕಾರ ಮುಂದಾಗಲಿದೆಯಂತೆ. ಅಲ್ಲಿಗೇ ಪಕ್ಕಪಕ್ಕದಲ್ಲೇ ಮೂರು ಸ್ಮಾರಕಗಳು ತಲೆಯೆತ್ತಲಿವೆ.