ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಜೈಲು ಸೇರಿ 4 ತಿಂಗಳು ಕಳೆದಿದೆ. ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದ್ದು ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನಿನ್ನೆ ಅರ್ಜಿ ವಿಚಾರಣೆ ಇಂದು ಇಂದಿಗೆ ಮುಂದೂಡಲಾಗಿತ್ತು. ಇವತ್ತು ದಾಸನ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಕಂಗಲಾಗಿದ್ದಾರೆ. ಇದೀಗ ಕೊಂಚ ರಿಲ್ಯಾಕ್ಸ್ ಆಗಿರೋ ದರ್ಶನ್ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. 3 ಬಾರಿ ಮೂಂದೂಡಿಕೆಯಾಗಿದ್ದ ಜಾಮೀನು ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ.
ನಿನ್ನೆ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಸಿ.ವಿ. ನಾಗೇಶ್ ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ ಎಂದು ವಾದಿಸಿದ್ದಾರೆ. ಪೊಲೀಸರೇ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಚಾರ್ಜ್ಶೀಟ್ನಲ್ಲಿ ದಾಖಲಿಸಿರುವ ಮಾಹಿತಿಗೂ ಸಾಕ್ಷಿಗಳು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೆ ಮನೆಯಿಂದ ಪೊಲೀಸರು ವಶಕ್ಕೆ ಪಡೆದ ಬಟ್ಟೆ, ಶೂಗಳ ಬಗ್ಗೆ ಪ್ರಸ್ತಾಪಿಸಿ, ಪಂಚನಾಮೆಯಲ್ಲಿ ದರ್ಶನ್ ಚಪ್ಪಲಿ ಧರಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ರಿಕವರಿ ಮಾಡಿರುವ ಆ ಶೂಗಳಲ್ಲಿ ರಕ್ತದ ಕಲೆ ಇದೆ ಎಂದು ಹೇಳಲಾಗಿದೆ. ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಒಗೆದು ಒಣಗಿಸಿದ್ದಾರೆ ಎಂದು ಹೇಳಿಕೆ ನೀಡಿದ ಬಳಿಕ, ಬಟ್ಟೆ ರಿಕವರಿ ಮಾಡಲಾಗಿದೆ. ಒಗೆದ ಬಟ್ಟೆಗಳಲ್ಲಿ ರಕ್ತದ ಕಲೆ ಇರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಾದಗಳು ಮಹತ್ವ ಪಡೆದಿದ್ದು ದರ್ಶನ್ಗೆ ಜಾಮೀನು ಸಿಗುವ ನಿರೀಕ್ಷೆ ಇದೆ.
ನಿನ್ನೆ ದರ್ಶನ್ ಪರ ವಕೀಲ ನಾಗೇಶ್ ಸುದೀರ್ಘ ವಾದ ಆಲಿಸಿದ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಇಂದು ಮಧ್ಯಾಹ್ನ 12:30ಕ್ಕೆ ಮತ್ತೆ ವಿಚಾರಣೆ ನಡೆಯಲಿದ್ದು ದಾಸನ ಜಾಮೀನಿನ ಭವಿಷ್ಯ ನಿರ್ಧಾರವಾಗಲಿದೆ.