ಲಕ್ನೋ: ಮಗಳ ಸೆಕ್ಸ್ ವೀಡಿಯೋ ವೈರಲ್ ಮಾಡೋದಾಗಿ ಆನ್ಲೈನ್ ವಂಚಕರು ಕರೆ ಮಾಡಿ ಬೆದರಿಕೆ ಹಾಕಿದ ಪರಿಣಾಮ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಶಿಕ್ಷಕಿಗೆ ವಂಚಕರು ಕರೆ ಮಾಡಿ ನಿಮ್ಮ ಮಗಳ ಅಶ್ಲೀಲ ವೀಡಿಯೋ ನಮ್ಮ ಬಳಿ ಇದೆ. 1 ಲಕ್ಷ ರೂ. ಹಣ ವರ್ಗಾಯಿಸದೇ ಇದ್ದರೆ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಮಹಿಳೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಮಾಲ್ತಿ ವರ್ಮಾ ಎಂದು ಗುರುತಿಸಲಾಗಿದೆ. ಅವರಿಗೆ ಸೆಪ್ಟೆಂಬರ್ 30 ರಂದು ಪೊಲೀಸ್ ಅಧಿಕಾರಿಯಂತೆ ವ್ಯಕ್ತಿಯಿಂದ ವಾಟ್ಸಾಪ್ ಕರೆ ಬಂದಿದೆ. ಈ ವೇಳೆ ನಿಮ್ಮ ಮಗಳನ್ನು ಲೈಂಗಿಕ ಕಳ್ಳಸಾಗಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ನಿಮ್ಮ ಮಗಳನ್ನು ಒಳಗೊಂಡ ಅಶ್ಲೀಲ ವೀಡಿಯೋ ಸಿಕ್ಕಿದೆ. ಅದನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಬಳಿಕ 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಳಿಕ ಘಟನೆಯ ಬಗ್ಗೆ ಮಹಿಳೆ ತನ್ನ ಮಗನಿಗೆ ತಿಳಿಸಿದ್ದು, ಪ್ರಕರಣದಲ್ಲಿ ತನ್ನ ಮಗಳನ್ನು ಸಿಲುಕಿಸದಂತೆ ರಕ್ಷಿಸಲು ಹಣ ವಗಾಯಿಸುವಂತೆ ತಿಳಿಸಿದ್ದಾರೆ. ಮಗ ಆ ಮೊಬೈಲ್ ಸಂಖ್ಯೆ ಪರಿಶೀಲಿಸಿದಾಗ ಅದು ಪಾಕಿಸ್ತಾನದ್ದು ಎಂದು ತಿಳಿದು ಬಂದಿದೆ.
ಮಗ ಕರೆ ಮಾಡಿ ತಾಯಿಯನ್ನು ಸಮಾಧಾನಪಡಿಸಿ, ಕಾಲೇಜಿನಲ್ಲಿದ್ದ ಸಹೋದರಿಯೊಂದಿಗೆ ಮಾತನಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ. ಅಷ್ಟಾದರೂ ತಾಯಿಗೆ ಆತಂಕದಿಂದ ಹೃದಯಾಘಾತವಾಗಿದೆ. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಮಹಿಳೆಯ ಮಗ ಮಾಹಿತಿ ನೀಡಿದ್ದಾರೆ.