ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗೊಂದು ನೋಡ ನೋಡುತ್ತಿದ್ದಂತೆ ಮಗುಚಿ ಬಿದ್ದ ಘಟನೆ ಪೂರ್ವ ಕಾಂಗೋದ ಕಿವು ಸರೋವರದಲ್ಲಿ ನಡೆದಿದೆ. ಈ ಭೀಕರ ದುರಂತದಲ್ಲಿ ಬರೋಬ್ಬರಿ 78 ಮಂದಿ ಮೃತಪಟ್ಟಿದ್ದಾರೆ.
ಪೂರ್ವ ಕಾಂಗೋದ ಕಿವು ಸರೋವರದಲ್ಲಿ ಸುಮಾರು 278 ಪ್ರಯಾಣಿಕರಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ 78 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ಮಾಹಿತಿ ನೀಡಿದ್ದಾರೆ. ಇನ್ನೂ ಈ ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್-ಜಾಕ್ವೆಸ್ ಪುರುಸಿ ಹೇಳಿದ್ದಾರೆ.
278 ಪ್ರಯಾಣಿಕರಿಂದ ತುಂಬಿದ್ದ ದೋಣಿಯು ನೋಡ ನೋಡುತ್ತಲೇ ಟೈಟಾನಿಕ್ ಬೋಟ್ ರೀತಿಯಲ್ಲೇ ಮಗುಚಿ ಬಿದ್ದಿದೆ. ಇದು ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಪ್ರಯಾಣ ಮಾಡುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಈ ಘಟನೆ ನಡೆದಿದ್ದು ಗೋಮಾ ಕಾಂಗೋದಲ್ಲಿ ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಗೋವಾದಲ್ಲಿ ಈ ದುರಂತ ನಡೆದಿದೆ ಎಂದು ವೈರಲ್ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ ಎಂದು ಗೋವಾ ಪೊಲೀಸರು ಸ್ಪಷ್ಟಪಡಿಸಿದ್ದು, ವಿಡಿಯೋ ಕಾಂಗೋದಿಂದ ಬಂದಿದೆ.
ಇನ್ನೂ, ದೋಣಿ ಮುಳುಗಿದ ಸುದ್ದಿ ತಿಳಿದ ಕೂಡಲೇ ತಕ್ಷಣವೇ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿ ಸುಮಾರು 10 ಮಂದಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ದೋಣಿಯಿಂದ ಕನಿಷ್ಠ 50 ಶವಗಳನ್ನು ಹೊರತೆಗೆಯಲಾಗಿದೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.