9 ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಎರಡು ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಪಾಕಿಸ್ತಾನದಲ್ಲಿ ತಮ್ಮ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜೈಶಂಕರ್ ರನ್ನು ಆಹ್ವಾನಿಸಲಾಗಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಇದೀಗ ಇದಕ್ಕೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜೈಶಂಕರ್ ಅವರನ್ನು ಆಹ್ವಾನಿಸಿಲ್ಲ ಎಂದಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ಖಾನ್ ಅವರ ಪಿಟಿಐ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರನ್ನು ಆಹ್ವಾನಿಸುವುದಾಗಿ ಪಕ್ಷದ ಮುಖಂಡ ನೀಡಿರುವ ಹೇಳಿಕೆಯಿಂದ ಪಿಟಿಐ ಪಕ್ಷ ಅಂತರ ಕಾಯ್ದುಕೊಂಡಿದ್ದು, ತಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜೈ ಶಂಕರ್ ರನ್ನು ಆಹ್ವಾನಿಸಿಲ್ಲ ಎಂದು ಹೇಳಿದೆ.
ಜೈಲಿನಲ್ಲಿರುವ ಇಮ್ರಾನ್ಖಾನ್ ಅವರ ಬಿಡುಗಡೆಗೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಸ್ಲಮಾಬಾದ್ ಹಾಗೂ ಲಾಹೋರ್ ನಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ರನ್ನು ಆಹ್ವಾನಿಸುವುದಾಗಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಮುಖಂಡ ಮುಹಮ್ಮದ್ ಆಲಿ ಸೈಫ್ ಹೇಳಿದ್ದರು ಎಂದು ವರದಿಯಾಗಿತ್ತು. ಇದು ಪಾಕಿಸ್ತಾನದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗುತ್ತಿದ್ದಂತೆ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಿಟಿಐ ಪಕ್ಷದ ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಖಾನ್, ಅಂತಹ ಯಾವುದೇ ಕಾರ್ಯ ತಮ್ಮ ಪಕ್ಷ ಮಾಡಿಲ್ಲ ‘ಪಿಟಿಐ ಪಕ್ಷದ ರಾಜಕೀಯ ಹೋರಾಟದಲ್ಲಿ ಭಾರತ ಸೇರಿದಂತೆ ಯಾವುದೇ ವಿದೇಶದ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.