ಹಿಂದೂಗಳ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ ಹೆಚ್ಚಿನ ಮಹತ್ವವಿದೆ.
ಅಶ್ವಿನ್ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಅಂದರೆ ಶಾರದೀಯ ನವರಾತ್ರಿಯ ಕೊನೆಯ ದಿನದಂದು ಭಾರತದ ವಿವಿಧ ರಾಜ್ಯಗಳಲ್ಲಿ ಅನೇಕ ಸಂಪ್ರದಾಯಗಳನ್ನು ನಡೆಸಲಾಗುತ್ತದೆ. ಇವುಗಳಲ್ಲಿ ಒಂದು ಆಯುಧ ಪೂಜೆ. ಇದು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವ ಹಬ್ಬ.
ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಈ ದಿನ ವಸ್ತುಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ. ರೈತರು ನೇಗಿಲು ಕೃಷಿಗೆ ಬಳಸುವ ವಸ್ತುಗಳಿಗೆ ಪೂಜೆ ಮಾಡಿದರೆ ಸೈನಿಕರು ಬಂದೂಕು, ಫಿರಂಗಿ, ಯುದ್ಧ ಟ್ಯಾಂಕರ್, ವಿಮಾನಗಳಿಗೆ ಪೂಜೆ ಮಾಡುತ್ತಾರೆ. ಮನೆಯಲ್ಲಿರುವ ಪುಟಾಣಿ ಸೈಕಲಿನಿಂದ ಹಿಡಿದು ದೊಡ್ಡ ವಾಹನಗಳಿಗೆ ಪೂಜೆ ನಡೆದರೆ ಕಚೇರಿಗಳಲ್ಲಿ ಕಂಪ್ಯೂಟರ್, ಉತ್ಪಾದನಾ ಯಂತ್ರಗಳಿಗೆ ಪೂಜೆ ನಡೆಯುತ್ತದೆ.
ಆಯುಧ ಪೂಜೆಯ ಹಿಂದೆ ಪೌರಾಣಿಕ ಕಥೆಯೂ ಇದೆ. ದ್ವಾಪರ ಯುಗದಲ್ಲಿ ಪಾಂಡವರು 12 ವರ್ಷಗಳ ವನವಾಸ, ಒಂದು ವರ್ಷ ಅಜ್ಞಾತವಾಸ ಮಾಡುತ್ತಾರೆ. ಅಜ್ಞಾತವಾಸವನ್ನು ಮತ್ಸ್ಯನಗರದ ವಿರಾಟರಾಯನ ಅರಮನೆಯಲ್ಲಿ ಕಳೆಯುತ್ತಾರೆ. ಅಜ್ಞಾತಕ್ಕೆ ತೆರಳುವ ಮುನ್ನ ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಬನ್ನಿ ವೃಕ್ಷದಲ್ಲಿ ಅಡಗಿಸಿ ಇಡುತ್ತಾರೆ.
ಅಜ್ಞಾತ ವಾಸದ ಕೊನೆಯಲ್ಲಿ ವಿರಾಟರಾಯನ ಗೋವುಗಳನ್ನು ಕೌರವರು ಅಪಹರಿಸುತ್ತಾರೆ. ಈ ಗೋವುಗಳನ್ನು ಬಿಡಿಸಿ ಕೌರವರ ಜೊತೆ ಯುದ್ಧ ಮಾಡಲು ಶಮಿ ವೃಕ್ಷದ ಮೇಲಿರಿಸಿದ್ದ ಆಯುಧಗಳನ್ನು ಕೆಳಗಡೆ ಇಳಿಸುತ್ತಾರೆ. ಅರ್ಜುನ ತನ್ನ ಗಾಂಡೀವವನ್ನು ಧರಿಸಿ ಯುದ್ಧ ಮಾಡಿ ಗೋವುಗಳನ್ನು ಕೌರವರ ಸೆರೆಯಿಂದ ಬಿಡಿಸುತ್ತಾನೆ. ಪಾಂಡವರು 12 ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ.
ಹಿಂದೆ ರಾಜರಿಗೆ ಆಯುಧಗಳ ಬಹಳ ಮುಖ್ಯವಾಗಿದ್ದವು. ಈ ಕಾರಣಕ್ಕೆ ನಮ್ಮನ್ನು ರಕ್ಷಿಸುವ ಕತ್ತಿ, ಖಡ್ಗಗದಂತಹ ಆಯುಧಗಳಿಗೆ ಒಂದು ದಿನ ವಿರಾಮ ನೀಡಿ ಅವುಗಳಿಗೆ ಕೃತಜ್ಞತೆ ಅರ್ಪಿಸಲು ಆಯುಧ ಪೂಜೆ ದಿನದಂದು ವಿಶೇಷ ಪೂಜೆ ಮಾಡಲಾಗುತ್ತದೆ. ಇದರ ಜೊತೆ ದಂಡಯಾತ್ರೆಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಆಯುಧ ಪೂಜೆ ದಿನ ಆಯುಧಗಳಿಗೆ ಪೂಜೆ ಮಾಡಿ ನಂತರ ಯದ್ಧಕ್ಕೆ ತೆರಳುತ್ತಿದ್ದರು.
ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವೀಕ ಶಕ್ತಿ ಇದೆ. ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ.