ಕಳೆದ ವರ್ಷ ಇಸ್ರೇಲ್ ನಡೆಸಿದ್ದ ಫೆಲೆಸ್ತೀನಿಗಳ ಮಾರಣ ಹೋಮ ಸೋಮವಾರಕ್ಕೆ ಒಂದು ವರ್ಷ ಪೂರ್ಣಗೊಳಿಸಿದೆ. ಯುದ್ಧದಲ್ಲಿ ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿದ್ದು ಇದರಿಂದ ಜನ ಮತ್ತಷ್ಟು ಕಂಗಾಲಾಗಿದ್ದಾರೆ. ಇದೇ ವೇಳೆ ವಿಶ್ವಾದ್ಯಂತ ಸಾವಿರಾರು ಜನ ಬೃಹತ್ ರ್ಯಾಲಿಗಳಲ್ಲಿ ಭಾಗಿಯಾಗಿ ಗಾಝಾ ಮತ್ತು ಲೆಬನಾನ್ಗಳಲ್ಲಿ ಕದನ ವಿರಾಮಕ್ಕೆ ಆಗ್ರಹಿಸಿದರು.
ಇಸ್ರೇಲ್ ಮೇಲೆ ಹಮಾಸ್ ನೇತೃತ್ವದ ದಾಳಿಯ ಮೊದಲ ವರ್ಷಾಚರಣೆಯ ಅಂಗವಾಗಿ ಸೋಮವಾರ ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಸಮಾವೇಶ ನಡೆಸಿದರು. ಇಸ್ರೇಲ್ ಗಾಝಾ ಮತ್ತು ಲೆಬನಾನ್ಗಳಲ್ಲಿ ತನ್ನ ದಾಳಿಗಳನ್ನು ಮುಂದುವರಿಸಿದ್ದು,ಇದು ವ್ಯಾಪಕ ಪ್ರಾದೇಶಿಕ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.
ಸೋಮವಾರ ನ್ಯೂಜಿಲಂಡ್ನ ಆಕ್ಲಂಡ್ನಲ್ಲಿ ಸರಕಾರಿ ಟಿವಿಎನ್ಝಡ್ ಟಿವಿ ಕೇಂದ್ರದ ಎದುರು ಸೇರಿ ಕದನ ವಿರಾಮಕ್ಕೆ ಆಗ್ರಹಿಸಿದ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ತೀವ್ರ ಬಲಪಂಥೀಯ ಮೂಲಭೂತವಾದಿ ಕ್ರಿಶ್ಚಿಯನ್ ಗುಂಪು ಡೆಸ್ಟಿನ ಚರ್ಚ್ನ ಅನುಯಾಯಿಗಳೊಂದಿಗೆ ಘರ್ಷಣೆ ನಡೆಸಿದರು.
ಎದುರಾಳಿ ಗುಂಪುಗಳನ್ನು ಪ್ರತ್ಯೇಕಿಸಲು 35 ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿದ್ದರು. ಟಿವಿಎನ್ಝಡ್ ಸಮೀಪದ ರಸ್ತೆಗೂ ಹಬ್ಬಿದ ಗಲಭೆಯನ್ನು ನಿಯಂತ್ರಿಸಲು ಪೋಲಿಸರು ಪ್ರಯತ್ನಿಸಿದ್ದು, ಓರ್ವ ಪ್ರತಿಭಟನಾಕಾರ ಪೆಪ್ಪರ್ ಸ್ಪ್ರೇ ಪ್ರಯೋಗಕ್ಕೆ ಗುರಿಯಾಗಿದ್ದ.
ಸೋಮವಾರ ಬೆಳಿಗ್ಗೆ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು, ಕದನವಿರಾಮ, ಸಂಯಮ ಮತ್ತು ಉದ್ವಿಗ್ನತೆ ಶಮನಕ್ಕೆ ಕರೆಯನ್ನು ನ್ಯೂಝಿಲಂಡ್ ಮುಂದುವರಿಸುತ್ತದೆ, ಪ್ರತೀಕಾರಕ್ಕಾಗಿ ಅಲ್ಲ. ಪ್ರಾದೇಶಿಕ ಉದ್ವಿಗ್ನತೆ ಮತ್ತು ಸಂಘರ್ಷವನ್ನು ತಗ್ಗಿಸುವ ಯಾವುದೇ ಮಿಲಿಟರಿ ಕ್ರಮಗಳಿಲ್ಲ ಎಂದು ಹೇಳಿದರು.
ಕಳೆದ ಒಂದು ವರ್ಷದಲ್ಲಿ ಅಸುನೀಗಿದವರ ಅಧಿಕೃತ ಸಂಖ್ಯೆಯೇ 41,000. ಇವರಲ್ಲಿ ಮಕ್ಕಳು, ಮಹಿಳೆಯರೇ ಅಧಿಕ. ಲಕ್ಷಾಂತರ ಕುಟುಂಬಗಳು ಮನೆ ತೊರೆದು ವಲಸೆ ಹೋಗಿವೆ. ಸೇನೆ ತುಕಡಿಗಳು ಇನ್ನೂ ಈ ವಲಯಲ್ಲಿ ಬೀಡು ಬಿಟ್ಟಿದ್ದು, ಲಕ್ಷಾಂತರ ಜನರು ನಿರಾಶ್ರಿತರ ಶಿಬಿರಗಳಲ್ಲಿಯೇ ದಿನ ಕಳೆಯಬೇಕಾಗಿದೆ. ಪರಿಣಿತರ ಪ್ರಕಾರ, ಗಾಜಾಪಟ್ಟಿ ಜನವಸತಿ ಮರುನಿರ್ಮಾಣಗೊಳ್ಳಲು ದಶಕಗಳೇ ಬೇಕಾಗಬಹುದು.
ಇಂದಿನ ಸ್ಥಿತಿಗೆ ಹಮಾಸ್ ನೇರ ಕಾರಣ ಎಂದು ಇಸ್ರೇಲ್ ಸೇನೆ ದೂಷಿಸುತ್ತದೆ. ಕಳೆದ ಅಕ್ಟೋಬರ್ 7ರಂದು ದಾಳಿ ನಡೆಸಿ 1,200 ಮಂದಿಯನ್ನು ಹತ್ಯೆ ಮಾಡಿ, 250 ಜನರನ್ನು ಒತ್ತೆಯಾಳಾಗಿ ಒಯ್ದಿತ್ತು. ಇದೇ ಯುದ್ಧದ ಕಿಡಿ ಹೊತ್ತಿಸಿತು ಎಂದು ಸೇನೆ ಹೇಳಿದೆ. ಈ ಒಂದು ವರ್ಷದಲ್ಲಿ ಗಾಜಾಪಟ್ಟಿಯಲ್ಲಿ ಶೇ 66ರಷ್ಟು ಕಟ್ಟಡಗಳು ಧ್ವಂಸವಾಗಿವೆ. 2.27 ಲಕ್ಷ ಮನೆಗಳು ನಾಶವಾಗಿವೆ. ಹೆಚ್ಚಿನವು ತೀವ್ರ ಸ್ವರೂಪದಲ್ಲಿ ಹಾನಿಗೊಂಡಿವೆ.