ಕೃತಕ ಬುದ್ದಿಮತ್ತೆ ಅಭಿವೃದ್ಧಿಯಲ್ಲಿ ಮಹತ್ತರ ಸಾಧನೆ ಮಾಡಿದ ಅಮೆರಿಕದ ಜಾನ್ ಜೆ. ಹಾಪ್ ಫೀಲ್ಡ್ ಮತ್ತು ಕೆನಡಾದ ಜೆಫ್ರಿ ಇ. ಹಿಂಟನ್ ಅವರಿಗೆ ಈ ಬಾರಿಯ ಭೌತ ವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರ ಸಂದಿದೆ.
ಭೌತಶಾಸ್ತ್ರದ ಸಾಧನಗಳನ್ನು ಬಳಸಿಕೊಂಡು ಕೃತಕ ನ್ಯೂರಲ್ ನೆಟ್ ವರ್ಕ್ ನಲ್ಲಿ ಮೆಷಿನ್ ಲರ್ನಿಂಗ್ ಸಕ್ರಿಯಗೊಳಿಸುವಲ್ಲಿ ಈ ಜೋಡಿ ಶ್ರಮಿಸಿದ್ದಾರೆ ಎಂದು ಆಯ್ಕೆ ಸಮಿತಿ ತಿಳಿಸಿದೆ. ನೊಬೆಲ್ ಪ್ರಶಸ್ತಿಯು 11 ಮಿಲಿಯನ್ ಸ್ವೀಡಿಶ್ ಕ್ರೌನ್ (ರೂ. 8.19 ಕೋಟಿ) ನಗದು ಬಹುಮಾನ ಒಳಗೊಂಡಿದೆ.
ನಮ್ಮ ಮಿದುಳು ಕೆಲಸ ಮಾಡುವ ರೀತಿಯನ್ನು ಅನುಕರಿಸಿಯೇ ಯಂತ್ರಗಳು ಕಲಿಯುವಂತೆ ಮಾಡುವ ವಿಧಾನಕ್ಕೆ ಕೃತಕ ನ್ಯೂರಲ್ ನೆಟ್ ವರ್ಕ್ ಎನ್ನಲಾಗುತ್ತದೆ. ಕೃತಕ ಬುದ್ಧಿಮತ್ತೆ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಲು ಕೃತಕ ನ್ಯೂರಲ್ ನೆಟ್ ವರ್ಕ್ ಸಹಕಾರಿಯಾಗಿದೆ.
ಏನಿದು ನ್ಯೂರಲ್ ನೆಟ್ವರ್ಕ್?: ನಮ್ಮ ಮೆದುಳು ಕೆಲಸ ಮಾಡುವ ರೀತಿಯನ್ನು ಅನುಕರಿಸಿ, ಯಂತ್ರಗಳು ಕಲಿಯುವಂತೆ ಮಾಡುವ ವಿಧಾನಕ್ಕೆ ಆರ್ಟಿಫಿಶಿಯಲ್ ನ್ಯೂರಲ್ ನೆಟ್ವರ್ಕ್ ಎಂದು ಕರೆಯಲಾಗುತ್ತದೆ. ಕೃತಕ ಬುದ್ಧಿಮತ್ತೆ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಲು ಕೃತಕ ನ್ಯೂರಲ್ ನೆಟ್ವರ್ಕ್ ಸಹಕಾರಿಯಾಗಿರುತ್ತದೆ.
ಕಳೆದ ವರ್ಷ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೂವರಿಗೆ ನೀಡಲಾಗಿತ್ತು. ಅಮೆರಿಕದ ಪೆರ್ರಿ ಅಗೋಸ್ಟಿನಿ, ಜರ್ಮನಿಯ ಫೆರೆಂಕ್ ಕ್ರೌಸ್ ಮತ್ತು ಸ್ವೀಡನ್ನ ಅನ್ನೆ ಎಲ್ ಹುಲಿಯರ್ ಅವರು ಪ್ರಶಸ್ತಿಯನ್ನು ಪಡೆದಿದ್ದರು. ಪರಮಾಣುಗಳಲ್ಲಿನ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಮತ್ತು ಬೆಳಕಿನ ಕಿರಣಗಳ ಆಟೊಸೆಕೆಂಡ್ ಪಲ್ಸ್ ಉತ್ಪಾದಿಸುವ ಸಂಶೋಧನೆಗಳಿಗಾಗಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು.
ಸ್ವೀಡನ್ನ ಶ್ರೇಷ್ಠ ಎಂಜಿನಿಯರ್, ರಸಾಯನಶಾಸ್ತ್ರಜ್ಞ ಮತ್ತು ಉದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಆಶಯದಂತೆ, ಪ್ರತಿ ವರ್ಷ ಡಿಸೆಂಬರ್ 10ರಂದು ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ನೊಬೆಲ್ ಸಮಿತಿಯು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡುತ್ತದೆ.