ಹಾಸನ: ಬೇಲೂರಿನ (Beluru) ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ಕುರಾನ್ (Quran) ಪಠಣ ವಿರೋಧಿಸಿ ಮಂಗಳವಾರ ಬೇಲೂರಿನಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ (Protest) ನಡೆಸಿದರು.
ಪ್ರತಿಭಟನೆ ವೇಳೆ ಮೆರವಣಿಗೆಗೆ ಎದುರಾಗಿ ಮುಸ್ಲಿಂ ಯುವಕನೊಬ್ಬ (Muslim Boy) ಬೈಕ್ನಲ್ಲಿ ಬಂದು ಏಕಾಏಕಿ ಕುರಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಯುವಕ ಘೋಷಣೆ ಕೂಗುತ್ತಿದ್ದಂತೆ ಪ್ರತಿಭಟನಾಕಾರರು ಯುವಕನನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ.
ತಕ್ಷಣ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಅನಾಹುತ ತಪ್ಪಿಸಿದ್ದಾರೆ. ಬಂಧಿತ ಯುವಕನನ್ನು ಶಾಕಿಬ್ ಹುಸೇನ್ ಎಂದು ಗುರುತಿಸಲಾಗಿದೆ. ಬೇಲೂರು ಪಟ್ಟಣದ ಮೀನು ಮಾರುಕಟ್ಟೆ ಪ್ರದೇಶದ ನಿವಾಸಿಯಾಗಿರುವ ಶಾಕಿಬ್ ಹುಸೇನ್ ಗುಜರಿ ಅಂಗಡಿ ನಡೆಸುತ್ತಿದ್ದಾನೆ.
ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಐಪಿಸಿ ಸೆಕ್ಷನ್ 107ರ ಅಡಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಂಧನ ಮಾಡಿ ತಹಸೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ. ಏಪ್ರಿಲ್ 4ರ ಬೇಲೂರು ಜಾತ್ರೆಯ ವರೆಗೆ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಕೀಬ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.