ಬೆಂಗಳೂರು: ಮುಡಾ ಸಂಕಷ್ಟದ ನಡುವೆ ಜಾತಿ ಗಣತಿ ಎಂಬ ಜೇನುಗೂಡಿಗೆ ಕಲ್ಲು ಹೊಡೆಯಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.ಸ್ವಪಕ್ಷೀಯರ ವಿರೋಧದ ಮಧ್ಯೆಯೂ ಜಾತಿ ಗಣತಿ ವರದಿ ಸಮೀಕ್ಷೆ ಬಿಡುಗಡೆಗೆ ಸಿದ್ದರಾಮಯ್ಯ ಆಸಕ್ತಿ ತೋರಿದ್ದಾರೆ.ವರದಿಗೆ ರಾಜ್ಯದ ಎರಡು ಪ್ರಮುಖ ಜಾತಿಗಳಾದ ಒಕ್ಕಲಿಗ- ಲಿಂಗಾಯತ ಸಮುದಾಯಗಳು ವಿರೋಧ ಮಾಡಿವೆ.ಅಕ್ಟೋಬರ್ 18 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಆಗುವ ಸಾಧ್ಯತೆ ಇದೆ
ವಿವಾದಾತ್ಮಕ ಜಾತಿ ಗಣತಿ ವರದಿಯನ್ನ ಜಾರಿಗೆ ತರಲು ರಾಜ್ಯ ಸರ್ಕಾರದ ಮುಂದಾಗಿದೆ.ಸ್ವಪಕ್ಷೀಯರ ವಿರೋಧದ ನಡುವೆಯೂ ಇದೇ ಅಕ್ಟೋಬರ್ ೧೮ ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಹೊರಟಿದೆ.ಅಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆದು ನಂತರ ಅಂತಿಮ ತೀರ್ಮಾನ ಕೈಗೊಳ್ಳಲು ಸಿಎಂ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗ್ತಿದೆ.
ಆದ್ರೆ,ವರದಿಯನ್ನ ವೈಜ್ಙಾನಿಕವಾಗಿ ತಯಾರಿಸಿ ಮಂಡಿಸಿ ಎಂಬ ತಕರಾರು ಪ್ರಬಲ ಸಚಿವರಿಂದ ಎದುರಾಗಿದೆ.ಹೀಗಾಗಿ ವಿವಾದಿತ ವರದಿಯನ್ನ ಸಿಎಂ ನಿಜಕ್ಕೂ ಸಂಪುಟದಲ್ಲಿ ಮಂಡಿಸ್ತಾರಾ.ಅದನ್ನ ಜಾರಿಗೆ ತರ್ತಾರಾ.ಇಲ್ಲ ಮೂಗಿಗೆ ತುಪ್ಪ ಸವರುವ ಕೆಲಸವನ್ನ ಮಾಡ್ತಾರಾ ಎಂಬ ಹಲವು ಅನುಮಾನಗಳು ಶುರುವಾಗಿವೆ.ಇದೆಲ್ಲದರ ನಡುವೆ ಬೇರೆ ರಾಜಕೀಯ ಲಾಭ ಲೆಕ್ಕಾಚಾರಗಳನ್ನಿಟ್ಟುಕೊಂಡೇ ಸಿಎಂ ಇದನ್ನ ಜಾರಿಗೆ ತರಲು ಹೊರಟಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ.ಆದ್ರೆ, ಸ್ವಪಕ್ಷೀಯ ವಿರೋಧವನ್ನ ಹೇಗೆ ಎದುರಿಸ್ತಾರೆ ಅನ್ನೋದು ಇಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಜಾತಿ ಗಣತಿ ವರದಿ ಜಾರಿಯ ಬಗ್ಗೆ ಪ್ರತಿಪಕ್ಷಗಳಿಗಿಂತ ಸ್ವಪಕ್ಷೀಯರಲ್ಲೇ ವಿರೋಧ ಎದುರಾಗಿದೆ.ಪ್ರಬಲ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ನಾಯಕರು ಯಾವುದೇ ಕಾರಣಕ್ಕೂ ಅನುಷ್ಠಾನ ಬೇಡ ಅಂತಿದ್ದಾರೆ.ಇನ್ನು ಕೆಲವರು ವೈಜ್ಙಾನಿಕವಾಗಿ ತಯಾರಿಸಿ ಆನಂತರ ಮಂಡಿಸಿ ಅಂತಿದ್ದಾರೆ.ಇದ್ರ ನಡುವೆ ಈ ವರದಿಯನ್ನ ಕಡ್ಡಿ ಮುರಿದಂತೆ ವಿರೋಧಿಸಿದ್ದು ಲಿಂಗಾಯತ ಸಮುದಾಯದ ಶಾಮನೂರು ಶಿವಶಂಕರಪ್ಪನವರು.ಆದ್ರೆ,ಅವರದೇ ಸಮುದಾಯದ ಮಾಜಿ ಸ್ಪೀಕರ್ ಕೋಳಿವಾಡ ಮಾತ್ರ ಇದು ವೈಜ್ಙಾನಿಕವರದಿ,ನಾನು ಕೂಡ ಸಮೀಕ್ಷೆಯಲ್ಲಿಭಾಗವಹಿಸಿದ್ದೆ ಎನ್ನುವ ಮೂಲಕ ವರದಿಯನ್ನ ಸಮರ್ಥಿಸಿಕೊಂಡಿದ್ದಾರೆ.
ಇನ್ನು ಜಾತಿ ಗಣತಿ ವರದಿಯನ್ನ ಬಹಿರಂಗಗೊಳಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕಾದ್ರೆ ಇದು ಅನಿವಾರ್ಯ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಆದರೆ ವರದಿ ವೈಜ್ಙಾನಿಕವಾಗಿರಬೇಕೆಂಬ ಮಾತು ಸೇರಿಸಿದ್ದಾರೆ.ಹತ್ತು ವರ್ಷಗಳಿಂದ ವರದಿಯನ್ನ ಯಾಕೆ ಮುಚ್ಚಿಟ್ರಿ ಅಂತ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.ಮೂಡಾ ಪ್ರಕರಣವನ್ನ ಸೈಲೆಂಟ್ ಮಾಡೋಕೆ ಇದನ್ನ ಮುಂದಕ್ಕೆ ತಂದಿದ್ದಾರೆಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಇನ್ನು ೧೬೫ ಕೋಟಿ ಖರ್ಚು ಮಾಡಿ ವರದಿ ಮಾಡಿಸಿ ಇಲ್ಲಿಯವರೆಗೆ ಸುಮ್ಮನಿದ್ದು ಇದೀಗ ಏಕಾಏಕಿ ಸಂಪುಟದಲ್ಲಿ ಮಂಡನೆಗೆ ಹೊರಟಿರೋದು ಯಾವ ಔಚಿತ್ಯ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕುಟುಕಿದ್ದಾರೆ.
ಒಟ್ನಲ್ಲಿ ಜಾತಿ ಗಣತಿ ವರದಿ ಜಾರಿಮಾಡುವ ವಿಚಾರ ರಾಜ್ಯದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.ಒಂದರ್ಥದಲ್ಲಿ ಮೂಡಾ ಪ್ರಕರಣವನ್ನೂ ಇದು ಸೈಲೆಂಟ್ ಮಾಡಿದೆ.ಅಕ್ಟೋಬರ್ ೧೮ ರ ಸಂಪುಟ ಸಭೆಯಲ್ಲಿ ಚರ್ಚೆಗೆ ಸಿಎಂ ಮುಂದಾಗಿದ್ದಾರೆ.ಸಾಧಕ ಬಾಧಕಗಳ ಚರ್ಚೆಯ ನಂತರ ವರದಿಯನ್ನ ಸಾರ್ವಜನಿಕರ ಅವಗಾಹನೆಗೆ ಬಿಡೋಕೆ ಹೊರಟಿದ್ದಾರೆ.ಈ ಮೂಲಕ ಪಕ್ಷಕ್ಕೆ ಆಗುವ ಲಾಭ ನಷ್ಟಗಳ ಲೆಕ್ಕಾಚಾರ ಹಾಕ್ತಿದ್ದಾರೆ.ಆದ್ರೆ ಪ್ರತಿಪಕ್ಷಗಳಿಗಿಂತ ಸ್ವಪಕ್ಷದಲ್ಲೇ ವಿರೋಧ ಇರೋದ್ರಿಂದ ಹೇಗೆ ಇದನ್ನ ಜಾರಿಗೆ ತರ್ತಾರೆ ಅನ್ನೋದು ಮಾತ್ರ ಯಕ್ಷಪ್ರಶ್ನೆಯಾಗಿದೆ.