ಅಮೆರಿಕ ಅಧ್ಯಕ್ಷೀಯ ಚುನಾವಣ ಕಣ ರಂಗೇರಿದೆ. ಚುನಾವಣೆಗೆ ಇನ್ನೂ ಕೆಲವೇ ಕೆಲ ದಿನಗಳು ಮಾತ್ರವೇ ಭಾಕಿ ಇದ್ದು ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಮಧ್ಯೆ ಭರ್ಜರಿ ಪೈಪೋಟಿ ಮುಂದುವರೆದಿದೆ. ಇದೀಗ ಚುನಾವಣಾ ದಿನದಂದು ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಅಫ್ಗಾನಿಸ್ತಾನ ಮೂಲದ ವ್ಯಕ್ತಿಯನ್ನು ಫೆಡರಲ್ ಬ್ಯುರೋ ಇನ್ವೆಸ್ಟಿಗೇಷನ್ ಬಂಧಿಸಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಿಂದ ಪ್ರೇರಣೆಗೊಂಡಿರುವ ಆರೋಪಿಯು ಭಾರಿ ಸಾವು-ನೋವು ಉಂಟು ಮಾಡುವ ಉದ್ದೇಶ ಹೊಂದಿದ್ದ ಎಂದು ಕ್ರಿಮಿನಲ್ ದೂರು ದಾಖಲಿಸಿಕೊಳ್ಳಲಾಗಿದ್ದು ಸದ್ಯ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.
‘ಬಂಧಿತನನ್ನು ನಾಸಿರ್ ಅಹ್ಮದ್ ತೌಹೇದಿ (27) ಎಂದು ಗುರುತಿಸಲಾಗಿದೆ. ಆರ್ಥಿಕವಾಗಿ ದಿವಾಳಿಯಾಗಿದ್ದ ಈತ, ಕಾಬುಲ್ನಲ್ಲಿ ತನ್ನ ಸಂಬಂಧಿಕರ ಪುನರ್ವಸತಿಗಾಗಿ ಹಣ ಹೊಂದಿಸಲು ದಾಳಿಗೆ ಸಂಚು ರೂಪಿಸಿದ್ದ. ಅದಕ್ಕಾಗಿ ತನ್ನ ಸೋದರಳಿಯನನ್ನೂ ಸೇರಿಸಿಕೊಂಡಿದ್ದ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ತೌಹೇದಿ AK 47 ರೈಫಲ್ಗಳನ್ನು ಬಳಸುವ ಉದ್ದೇಶ ಹೊಂದಿದ್ದನಾದರೂ, ಯಾವ ಸ್ಥಳದಲ್ಲಿ ದಾಳಿ ನಡೆಸಲು ಯೋಜಿಸಿದ್ದ ಎಂಬುದು ಸ್ಪಷ್ಟವಾಗಿಲ್ಲ. ವಾಷಿಂಗ್ಟನ್ ನಗರದಲ್ಲಿ ಅಳವಡಿಸಿರುವ ಕ್ಯಾಮರಾಗಳ ಆಕ್ಸೆಸ್ ಪಡೆಯುವುದು ಹೇಗೆ ಎಂಬ ಬಗ್ಗೆ ಆನ್ಲೈನ್ನಲ್ಲಿ ಹುಡುಕಾಡಿದ್ದ. ಶ್ವೇತಭವನ ಮತ್ತು ವಾಷಿಂಗ್ಟನ್ ಸ್ಮಾರಕಗಳ ವೆಬ್ಕ್ಯಾಮ್ ಬಗ್ಗೆಯೂ ಆನ್ ಲೈನ್ ನಲ್ಲಿ ಹುಡುಕಾಡಿರುವುದು ತಿಳಿದು ಬಂದಿದೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಸದಸ್ಯ ಎನ್ನಲಾದ ವ್ಯಕ್ತಿಗೆ ಯೋಜನೆ ಕುರಿತು ಮಾಹಿತಿ ನೀಡಿದ್ದ. ಆತನ ಯಾವುದೇ ಆದೇಶ ಪಾಲಿಸುವುದಾಗಿ ಹೇಳಿದ್ದ’ ಎಂಬುದೂ ದೂರಿನಲ್ಲಿದೆ.
‘ದೇವರ ಇಚ್ಛೆ ಹಾಗೂ ಸಹಕಾರದೊಂದಿಗೆ ಚುನಾವಣೆ ದಿನಕ್ಕೆ ಸಜ್ಜಾಗುತ್ತೇವೆ’ ಎಂಬ ಸಂದೇಶ ಕಳುಹಿಸಿದ್ದ ಎಂದೂ ತಿಳಿಸಲಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಇದೇ ವರ್ಷ ನವೆಂಬರ್ 5ರಂದು ನಡೆಯಲಿದೆ.