ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಡಿ ವರದಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತಂದಿದೆ. ಈಗಾಗಲೇ ಹಲವು ಗಣ್ಯ ವ್ಯಕ್ತಿಗಳು ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ. ಈ ಬೆನ್ನಲ್ಲೆ ಮಲಯಾಳಂ ಚತ್ರರಂಗ್ಕಕೆ ಮತ್ತೆ ಸಂಕಷ್ಟ ಎದುರಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಕೆಲ ನಟರು ಸಿಲುಕಿಕೊಂಡಿದ್ದು, ಪ್ರಕರಣದ ತನಿಖೆ ನಡೆಸುವುದಾಗಿ ಕೊಚ್ಚಿ ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಭೂಗತ ಪಾತಕಿ, ಮಾದಕ ವಸ್ತುವಿನ ಡೀಲರ್ ಓಂ ಪ್ರಕಾಶ್ ಅನ್ನು ಮರಡು ಪೊಲೀಸರು ಹೋಟೆಲ್ ಒಂದರಲ್ಲಿ ಬಂಧಿಸಿದ್ದರು. ಆತನ ಬಂಧಿಸಿದ ಹೋಟೆಲ್ನಲ್ಲಿ ಡ್ರಗ್ಸ್ ವಶಪಡಿಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದಾಗ ಹೋಟೆಲ್ ಗೆ ಕೆಲ ನಟ-ನಟಿಯರು ಬಂದು ಹೋಗಿರುವುದು ಪತ್ತೆ ಆಗಿದ್ದು, ಅವರ ವಿಚಾರಣೆ ನಡೆಸುವುದಾಗಿ ಇದೀಗ ಕೊಚ್ಚಿ ಪೊಲೀಸರು ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಶ್ರೀನಾಥ್ ಬಾಸಿ ಹಾಗೂ ನಟಿ ಪ್ರಯಾಗಾ ಮಾರ್ಟಿನ್ ಅವರುಗಳು ಓಂ ಪ್ರಕಾಶ್ ತಂಗಿದ್ದ ಹೋಟೆಲ್ಗೆ ಭೇಟಿ ನೀಡಿದ್ದರು ಎನ್ನುವುದು ಪೊಲೀಸರಿಗೆ ತಿಳಿದು ಬಂದಿದ್ದು, ಅವರಿಬ್ಬರನ್ನೂ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅವರಿಬ್ಬರು ಮಾತ್ರವಲ್ಲದೆ ಸುಮಾರು 30 ಮಂದಿ ಓಂ ಪ್ರಕಾಶ್ ಇದ್ದ ಹೋಟೆಲ್ ಕೋಣೆಗೆ ಭೇಟಿ ನೀಡಿರುವುದು ಪೊಲೀಸರಿಗೆ ತಿಳಿದು ಬಂದಿದ್ದು ಎಲ್ಲರಿಗೂ ನೋಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತದೆ. ಈ ನಡುವೆ ನಟಿ ಪ್ರಯಾಗಾ ಮಾರ್ಟಿನ್ ಅವರ ಕುಟುಂಬದವರು ನಟಿಯು ಡ್ರಗ್ಸ್ ಪ್ರಕರಣದೊಂದಿಗೆ ಸಂಬಂಧ ಹೊಂದಿಲ್ಲ ಎಂದಿದ್ದಾರೆ.
ಈ ಹಿಂದೆ ಶ್ರೀನಾಥ್ ಬಾಸಿ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಮಲಯಾಳಂ ಚಿತ್ರರಂಗದವರು ಇದೇ ಕಾರಣಕ್ಕೆ ಶ್ರೀನಾಥ್ ಬಾಸಿಯನ್ನು ಚಿತ್ರರಂಗದಿಂದ ಬ್ಯಾನ್ ಮಾಡಿದ್ದರು. ಬಳಿಕ ಕ್ಷಮೆ ಕೇಳಿ ಶ್ರೀನಾಥ್ ಬಾಸಿ ನಟನೆ ಮುಂದುವರೆಸಿದ್ದರು.
ಶ್ರೀನಾಥ್ ಬಾಸಿ, ಮಲಯಾಳಂನ ಸೂಪರ್ ಹಿಟ್ ಸಿನಿಮಾಗಳಾದ ‘ಉಸ್ತಾದ್ ಹೋಟೆಲ್’, ‘ಕುಂಬಳಂಗಿ ನೈಟ್ಸ್’, ‘ಕಪ್ಪೆಲ’, ‘ಹೋಮ್’, ‘ಭೀಷ್ಮ ಪರ್ವಂ’, ‘ಮಂಜುಮೆಲ್ ಬಾಯ್ಸ್’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಮೇಲೆ ಈ ಹಿಂದೆಯೂ ಕೆಲ ಕೇಸುಗಳು ದಾಖಲಾಗಿದ್ದವು. ಯೂಟ್ಯೂಬ್ ಆಂಕರ್, ರೇಡಿಯೋ ಜಾಕಿಯ ಮೇಲೆ ದೌರ್ಜನ್ಯ ಮಾಡಿದ ಪ್ರಕರಣದಲ್ಲಿ ಇವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಇನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪ್ರಯಾಗಾ ಮಾರ್ಟಿನ್, 2019 ರಲ್ಲಿ ಬಿಡುಗಡೆ ಆದ ಕನ್ನಡದ ‘ಗೀತಾ’ ಸೇರಿದಂತೆ ತಮಿಳಿನ ‘ಪಿಸಾಸು’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.