ಖ್ಯಾತ ಉದ್ಯಮಿ, ಕರುಣಾಮಯಿ, ಅಜಾತಶತ್ರು ಎನಿಸಿಕೊಂಡಿದ್ದ ರತನ್ ಟಾಟಾ ತಮ್ಮ 86ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಜೀವನದುದ್ದಕ್ಕೂ ಸಮಾಜದ ಒಳಿತಿಗಾಗಿಯೇ ಶ್ರಮಿಸಿದವರು ರತನ್ ಟಾಟಾ. ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ರತನ್ ಟಾಟಾ ಇಂದು ನಮ್ಮ ಜೊತೆ ಇಲ್ಲ. ಇದೀಗ ರತನ್ ಟಾಟಾ ನಿಧನಕ್ಕೆ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ‘ಭಾರತದ ಹೆಮ್ಮೆಯ ಪುತ್ರ ರತನ್ ನಾವಲ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ. ‘ರತನ್ ಟಾಟಾ ನಿಧನವಾರ್ತೆ ಕೇಳಿ ದುಃಖವಾಗಿದೆ’ ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.
‘ನಿಮ್ಮ ದಯೆಯಿಂದ ನೀವು ಲಕ್ಷಾಂತರ ಜನರ ಜೀವಗಳನ್ನು ತಲುಪಿದ್ದೀರಿ. ನಿಮ್ಮ ನಾಯಕತ್ವ ಮತ್ತು ಉದಾರತೆಯ ಪರಂಪರೆಯು ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ದೇಶಕ್ಕಾಗಿ ನೀವು ನೀಡಿದ ಕೊಡುಗೆ, ನಿಮ್ಮ ಸಾಟಿಯಿಲ್ಲದ ಉತ್ಸಾಹ ಮತ್ತು ಸಮರ್ಪಣೆಗಾಗಿ ಧನ್ಯವಾದಗಳು. ನೀವು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಪ್ರಿಯಾಂಕಾ ಚೋಪ್ರಾ ಭಾವುಕರಾಗಿದ್ದಾರೆ.
‘ಉದ್ಯಮದ ಟೈಟಾನ್ ರತನ್ ಟಾಟಾ ಅವರ ನಿಸ್ವಾರ್ಥ ಲೋಕೋಪಕಾರ ಮತ್ತು ದೂರದೃಷ್ಟಿಯ ನಾಯಕತ್ವವು ಅಸಂಖ್ಯಾತ ಜೀವನವನ್ನು ಪರಿವರ್ತಿಸಿದೆ. ಅವರು ಶಾಂತಿಯಿಂದ ವಿಶ್ರಾಂತಿ ಪಡೆಯಲಿ’ ಎಂದು ಜೂನಿಯರ್ ಎನ್ಟಿಆರ್ ಟ್ವೀಟ್ ಮಾಡಿದ್ದಾರೆ.