ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಬೈಡನ್ ಇಸ್ರೇಲ್ ಭದ್ರತೆಗೆ ಅಮೆರಿಕದ ನೀಡುವ ಅಚಲ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ.
ಶ್ವೇತಭವನದ ಹೇಳಿಕೆಯ ಪ್ರಕಾರ, ಸಾವಿರಾರು ಕ್ಷಿಪಣಿಗಳು ಮತ್ತು ರಾಕೆಟ್ಗಳನ್ನು ಹಾರಿಸಿದ ಹಿಜ್ಬುಲ್ಲಾದಿಂದ ನಾಗರಿಕರನ್ನು ರಕ್ಷಿಸುವ ಇಸ್ರೇಲ್ನ ಹಕ್ಕನ್ನು ಬೈಡನ್ ಪ್ರತಿಪಾದಿಸಿದರು. ಜೊತೆಗೆ ಹೆಚ್ಚಿನ ಜನಸಂಖ್ಯೆ ಇರುವ ಬೈರೂತ್ನಂತಹ ಪ್ರದೇಶಗಳಲ್ಲಿ ನಾಗರಿಕರಿಗೆ ಆಗುತ್ತಿರುವ ಹಾನಿಗಳನ್ನು ಕಡಿಮೆ ಮಾಡುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಇದೇ ವೇಳೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹ ಇಸ್ರೇಲಿ ಪ್ರಧಾನಿಯೊಂದಿಗಿನ ಮಾತನಾಡಿದ್ದಾರೆ. ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್ನ ಖಂಡಾಂತರ ಕ್ಷಿಪಣಿ ದಾಳಿಯನ್ನು ಬೈಡನ್ ಖಂಡಿಸಿದ್ದಾರೆ. ಅಂತಹ ಆಕ್ರಮಣದ ವಿರುದ್ಧ ಸಾಮೂಹಿಕ ಕ್ರಮದ ಅಗತ್ಯವನ್ನು ಒತ್ತಿಹೇಳಿದ್ದಾರೆ. ಎರಡೂ ದೇಶಗಳಲ್ಲಿ ನಾಗರಿಕರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಹಿಂದಿರುಗಲು ‘ಬ್ಲೂ ಲೈನ್’ಸೃಷ್ಟಿಯ ಕುರಿತಂತೆ ರಾಜತಾಂತ್ರಿಕ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದಾರೆ.
ಗಾಜಾ ಜೊತೆಗಿನ ರಾಜತಾಂತ್ರಿಕತೆ ನವೀಕರಿಸುವ ಮತ್ತು ಹಮಾಸ್ ಒತ್ತೆಯಾಳಾಗಿರಿಸಿಕೊಂಡಿರುವವರ ಶೀಘ್ರ ಬಿಡುಗಡೆ ಬಗ್ಗೆ ನಾಯಕರು ಮಾತುಕತೆ ನಡೆಸಿದರು.
ಗಾಜಾದಲ್ಲಿನ ಮಾನವೀಯ ಪರಿಸ್ಥಿತಿ ಮತ್ತು ಜೋರ್ಡಾನ್ನಿಂದ ತಕ್ಷಣವೇ ಕಾರಿಡಾರ್ ಅನ್ನು ಪುನಶ್ಚೇತನಗೊಳಿಸುವ ಮೂಲಕ ಉತ್ತರಕ್ಕೆ ಪ್ರವೇಶ ಮರುಸ್ಥಾಪಿಸುವ ಅಗತ್ಯವನ್ನು ಬೈಡನ್ ಚರ್ಚಿಸಿದರು. ಅಲ್ಲದೆ, ಇಸ್ರೇಲ್ ಜೊತೆ ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡರು ಎಂದು ಪ್ರಕಟಣೆ ತಿಳಿಸಿದೆ.