ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪಲಾಯನಗೊಂಡ ಬಳಿಕ ಸರ್ಕಾರದ ಉಸ್ತುವಾರಿ ನಾಯಕರಾಗಿ ಮೊಹಮ್ಮದ್ ಯೂನಸ್ ಅಧಿಕಾರಿ ಸ್ವೀಕರಿಸಿದ್ದಾರೆ. ಇದೀಗ ಚುನಾವಣೆಗೂ ಮುನ್ನ ಕೆಲವು ಸುಧಾರಣಾ ಕಾರ್ಯಗಳು ನಡೆಯಬೇಕಿರುವ ಕಾರಣಕ್ಕೆ ಸಾರ್ವತ್ರಿಕ ಚುನಾವಣೆಯ ಕಾಲಮಿತಿ ನಿಗದಿಪಡಿಸಲು ಯೂನಸ್ ನಿರಾಕರಿಸಿದ್ದಾರೆ.
ವಿದ್ಯಾರ್ಥಿ ಸಮುದಾಯ ನೇತೃತ್ವದ ಪ್ರತಿಭಟನೆಯಿಂದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪದಚ್ಯುತಗೊಂಡಿತ್ತು. ಆ ನಂತರ ರಚನೆಯಾಗಿದ್ದ ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರರಾಗಿ ಮೊಹಮ್ಮದ್ ಯೂನಸ್ ನೇಮಕಗೊಂಡಿದ್ದರು.
84 ವರ್ಷ ವಯಸ್ಸಿನ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರೂ ಆದ ಯೂನಸ್ ಅವರು, ಸದ್ಯ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ‘ಈ ಕಾರ್ಯ ತುಂಬಾ ಕಠಿಣವಾದುದಾಗಿದೆ’ ಎಂದೂ ಹೇಳಿಕೊಂಡಿದ್ದಾರೆ.
‘ಉಸ್ತುವಾರಿ ಸರ್ಕಾರದಲ್ಲಿರುವ ಯಾರಿಗೂ ಸುದೀರ್ಘ ಕಾಲ ಈ ಕಾರ್ಯದಲ್ಲಿ ಉಳಿಯುವ ಗುರಿ ಇಲ್ಲ’ ಎಂದು ಯೂನಸ್ ತಮ್ಮ ನೇತೃತ್ವದ ಉಸ್ತುವಾರಿ ಸರ್ಕಾರ ಕುರಿತು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ನನ್ನ ಪ್ರಥಮ ಆದ್ಯತೆ ಸುಧಾರಣಾ ಕಾರ್ಯಕ್ರಮಗಳಿಗೆ. ನೀವು ಚುನಾವಣೆ ನಡೆಸಿ ಎಂದು ಈಗ ಹೇಳಿದರೆ ನಾವು ಅದಕ್ಕೆ ಸಿದ್ಧರಿದ್ದೇವೆ. ಆದರೆ, ಮೊದಲು ಚುನಾವಣೆ ನಡೆಸುವುದು ತಪ್ಪಾಗುತ್ತದೆ’ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.