ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕಳೆದ ರಾತ್ರಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಜರುಗಿದೆ. ಇನ್ನೂ ಸಭೆಯಲ್ಲಿ ಟಿಕೆಟ್ ವಿಚಾರದ ಕುರಿತು ಚರ್ಚೆ ನಡೆಸುವುದಕ್ಕೆ ನಿರಾಕರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಟಿಕೆಟ್ ಗೆ ಸಮಿತಿ ರಚನೆ ಮಾಡಿ, ಒಬ್ಬ ಸಂಸದ, ಒಬ್ಬ ಕೋರ್ ಕಮಿಟಿ ಸದಸ್ಯ ಒಬ್ಬ ಪದಾಧಿಕಾರಿ ಮೂವರ ಸಮಿತಿ ರಚಿಸಿ ಇವರಿಗೆ ಎರಡು ಜಿಲ್ಲೆಯ ಜವಾಬ್ದಾರಿ ಹಂಚಿಕೆ ಮಾಡಿ, ತಮ್ಮದೇ ಜಿಲ್ಲೆಯ ಸಂಸದರಿಗೆ ಅದೇ ಜಿಲ್ಲೆ ನೀಡಬೇಡಿ.
ಪ್ರತಿ ತಂಡ ಎರಡು ಬೇರೆ ಜಿಲ್ಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಪಡೆಯಬೇಕು. ಈ ತಿಂಗಳ 31 ಕ್ಕೆ ಸಮಿತಿ ಅಭಿಪ್ರಾಯ ಪಡೆದು ಕೇಂದ್ರಕ್ಕೆ ವರದಿ ನೀಡಬೇಕು. ಆಕಾಂಕ್ಷಿಗಳು ಎಷ್ಟು ಜನ ಇದ್ದಾರೆ, ಹಾಲಿ ಶಾಸಕರ ಬಗ್ಗೆ ಏನು ಅಭಿಪ್ರಾಯ? ಟಿಕೆಟ್ ಬದಲಾವಣೆ ಮಾಡಬೇಕಾ? ಹೊಸಬರಿಗೆ ಅವಕಾಶ ನೀಡಬೇಕಾ? ಯಾವ ಆಕಾಂಕ್ಷಿಗಳ ಪರ ಹೆಚ್ಚು ಒಲವಿದೆ? ಒಂದೇ ದಿನದಲ್ಲಿ ಈ ಕೆಲಸ ಮಾಡಿ. ಕ್ಷೇತ್ರದ ಆಕಾಂಕ್ಷಿಗಳು, ಪದಾಧಿಕಾರಿಗಳು, ಶಾಸಕರು, ಸಂಸದರು, ಪರಿಷತ್ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ನೇರವಾಗಿ ಕೇಂದ್ರಕ್ಕೆ ಈ ವರದಿ ನೀಡಿ. ಬಳಿಕ ಟಿಕೆಟ್ ಯಾರಿಗೆ ಅನ್ನೋದನ್ನು ನಾವು ತೀರ್ಮಾನ ಮಾಡುತ್ತೇವೆ ಎಂದು ಸಭೆಯಲ್ಲಿ ಅಮಿತ್ ಶಾ ಸೂಚನೆ ನೀಡಿದ್ದಾರೆ. ಇನ್ನು, ಕೋರ್ ಕಮಿಟಿ ಸಭೆಯಲ್ಲಿ ಮೋರ್ಚಾಗಳ ಸಮಾವೇಶ, ರಥಯಾತ್ರೆ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲ್ಲಿಕೆ ಮಾಡಿದರು. ಅಲ್ಲದೆ ಈ ಎಲ್ಲಾ ಕಾರ್ಯಕ್ರಮಗಳಿಂದಾಗಿ ಪಕ್ಷಕ್ಕೆ ಲಾಭ ಆಗಿದೆ ಪಕ್ಷದ ಸಂಘಟನೆಗೂ ಹೆಚ್ಚಿನ ಶಕ್ತಿ ಸಿಕ್ಕಂತಾಗಿದೆ ಎಂದರು.