ರಾಮನಗರ:- ಚನ್ನಪಟ್ಟಣ ಕ್ಷೇತ್ರ ಬಿಜೆಪಿಗೆ ಬಿಟ್ಟುಕೊಡುವ ಮಾತಾಗಿಲ್ಲ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ಹೇಳಿದ್ದಾರೆ.ಚುನಾವಣೆ ಸಮೀಪಿಸುತ್ತಿದೆ. ಯೋಗೇಶ್ವರ್ ಅವರಿಗೆ ಅಥವಾ ಇನ್ಯಾರಿಗೆ ಆಗಲಿ ಕ್ಷೇತ್ರವನ್ನು ಬಿಟ್ಟುಕೊಡಬೇಕೆಂದು ಬಿಜೆಪಿ ವರಿಷ್ಠರ ಜೊತೆ ಒಪ್ಪಂದವಾಗಿರಲಿಲ್ಲ.
ಅವತ್ತು ಏನು ನಡೆಯಿತು ಎಂದು ಹೇಳಲೇಬೇಕು. ಜನರಿಗೆ ಸತ್ಯ ಗೊತ್ತಾಗಬೇಕು ಎಂಬುದು ನನ್ನ ಉದ್ದೇಶ. ಬೆಂಗಳೂರು ಗ್ರಾಮಾಂತರ ಲೋಕಾಸಭೆ ಕ್ಷೇತ್ರದಿಂದ ಡಾ.ಸಿ.ಎನ್ ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಯಾಗಲು ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರೇ ಮೂಲ ಕಾರಣ. ಅವರ ಒತ್ತಾಯಕ್ಕೆ ಗೌರವ ಕೊಟ್ಟು, ಅವರ ಮಾತಿಗೆ ತಲೆಬಾಗಿ ಅವರನ್ನು ಅಭ್ಯರ್ಥಿ ಮಾಡಲಾಯಿತು ಎಂದರು.
ಈ ಕ್ಷಣದ ತನಕ ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರಾಗಬೇಕು ಎಂದು ನಾನು ನಿರ್ಧಾರ ಮಾಡಿಲ್ಲ. ಕಾರ್ಯಕರ್ತರ ಸಭೆಗಳನ್ನು ಮಾಡಲಾಗುತ್ತಿದೆ. ಅಂತಿಮವಾಗಿ ರಾಜ್ಯ ಮತ್ತು ದೆಹಲಿ ಮಟ್ಟದ ನಾಯಕರ ಜತೆ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುವುದು. ಬಿಜೆಪಿ ನಾಯಕರು, ಕಾರ್ಯಕರ್ತರು ಸಭೆ ಮಾಡಿರುವುದರಲ್ಲಿ ತಪ್ಪೇನಿಲ್ಲ. ಅದನ್ನು ತಪ್ಪು ಎಂದು ನಾನು ಹೇಳಲಾರೆ. ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆಯಾಗಿದೆ. ಕಾರ್ಯಕರ್ತರ ಅಭಿಪ್ರಾಯದಂತೆ ನಾನು ನಿರ್ಧಾರ ಕೈಗೊಳ್ಳಬೇಕಿದೆ ಎಂದರು.