ವಾಷಿಂಗ್ಟನ್: ಅಮೆರಿಕದಲ್ಲಿ ಪದೇ ಪದೇ ಗುಂಡಿನ ದಾಳಿ ನಡೆಯುತ್ತಲೆ ಇರುತ್ತದೆ. ಇದೀಗ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು 6 ಜನರು ಮೃತಪಟ್ಟಿರುವ ಕುರಿತು ವರದಿಯಾಗಿದೆ.
ಅಮೆರಿಕದ ನ್ಯಾಶ್ವಿಲ್ಲೆಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಒಟ್ಟು 6 ಜನರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. 2023ರಲ್ಲಿ ಅಮೆರಿಕದ ಶಾಲೆಗಳಲ್ಲಿ ನಡೆದಿರುವ 13ನೇ ಗುಂಡಿನ ದಾಳಿಯಾಗಿದೆ.
28 ವರ್ಷದ ಮಹಿಳೆ ಆಡ್ರೆ ಹೇಲ್ ಶೂಟ್ ಮಾಡಿದ್ದು, ಆಕೆ ನ್ಯಾಶ್ವಿಲ್ಲೆಯಲ್ಲಿರುವ ಕವೆನೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಳು ಎನ್ನಲಾಗಿದೆ. ಆಕೆ ಶಾಲೆಯಲ್ಲಿ 3 ಮಕ್ಕಳ ಮೇಲೆ ದಾಳಿ ಮಾಡಿ ಕೊಂದಿದ್ದಾಳೆ. ಮಾತ್ರವಲ್ಲದೇ ಇಡೀ ದುಷ್ಕೃತ್ಯವನ್ನು ಆಕೆ ಮೊದಲೇ ಯೋಜಿಸಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರು ಮೇಲೂ ಆಕೆ ಗುಂಡು ಹಾರಿಸಿದ್ದಾಳೆ. ಘಟನೆಯಲ್ಲಿ ಆಕೆಯೂ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರದಿಗಳ ಪ್ರಕಾರ ಆಡ್ರೆ ತೃತೀಯ ಲಿಂಗಿಯಾಗಿದ್ದು, ಆಕೆ ಕಲಿತಿದ್ದ ಪ್ರಾಥಮಿಕ ಶಾಲೆಯ ವಿರುದ್ಧ ಅಸಮಾಧಾನಗೊಂಡಿದ್ದಳು ಎನ್ನಲಾಗಿದೆ. ಈ ಹಿನ್ನೆಲೆ ಸೇಡು ತೀರಿಸಿಕೊಳ್ಳಲು ಆಕೆ ಶಾಲೆಗಳ ಮೇಲೆ ದಾಳಿ ನಡೆಸಿದ್ದಾಳೆ. ಆರೋಪಿಯು ನ್ಯಾಶ್ವಿಲ್ಲೆ ಪ್ರಾಥಮಿಕ ಶಾಲೆ ಮಾತ್ರವಲ್ಲ ಇನ್ನೂ ಅನೇಕ ಶಾಲೆಗಳನ್ನು ಗುರಿಯಾಗಿಸಿಕೊಂಡಿದ್ದಳು ಎನ್ನಲಾಗುತ್ತಿದೆ.