ಬೆಂಗಳೂರು/ ಚೆನ್ನೈ: ಮೈಸೂರಿನಿಂದ ದರ್ಭಾಂಗ್ಗೆ ಹೊರಟಿದ್ದ ಎಕ್ಸ್ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದರು.
ಮೈಸೂರು ದಸರಾ ನಮಗೆ ದೊಡ್ಡ ಹಬ್ಬ. ಆಯುಧ ಪೂಜೆ ದಿನ ಈ ದುರಂತ ಆಗಬಾರದಿತ್ತು. ರೈಲಿನಲ್ಲಿ ಒಟ್ಟು 994 ಜನ ಪ್ರಯಾಣಿಕರಿದ್ದರು. ಅದರಲ್ಲಿ ಮೈಸೂರಿನ 180 ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದರು. ಚೆನ್ನೈ ತಲುಪಲು ಇನ್ನು 30 ಕಿಮೀ ಇತ್ತು. ಟ್ರ್ಯಾಕ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದರು.
ಅಪಘಾತದ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ನನಗಿರುವ ಮಾಹಿತಿ ಪ್ರಕಾರ 100 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಣಾ ತಂಡ ಈಗಾಗಲೇ ಸ್ಥಳಕ್ಕೆ ಧಾವಿಸಿದೆ. ರೈಲ್ವೆ ಅಧಿಕಾರಿಗಳು ಕೂಡ ಸ್ಥಳಕ್ಕೆ ತೆರಳಿದ್ದಾರೆ. ಸದ್ಯದವರೆಗೆ ಯಾವುದೇ ಸಾವು-ನೋವು ಆಗಿಲ್ಲ. ರೈಲ್ವೆ ವಿಭಾಗಗಳಿಂದ ಸಹಾಯವಾಣಿ ಕೂಡ ಬಿಡುಗಡೆ ಮಾಡಲಾಗಿದೆ. ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ರೈಲು ಬಿಹಾರ್ಗೆ ಪ್ರಯಾಣಿಸುತ್ತಿತ್ತು. ಬಿಹಾರಕ್ಕೆ ತೆರಳುವವರಿಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗುವುದು. ಗಂಭೀರ ಗಾಯಗಳಾಗಿದ್ದವರಿಗೆ ಅಗತ್ಯ ಚಿಕಿತ್ಸೆ ನೆರವು ನೀಡಲಾಗುವುದು. ಅಗ್ನಿಶಾಮಕ ದಳ, ರಕ್ಷಣಾ ತಂಡ, ಪೊಲೀಸರು, ರೈಲ್ವೆ ಅಧಿಕಾರಿಗಳು ಒಟ್ಟಾಗಿ ನಿಂತು ರಕ್ಷಣಾ ಕಾರ್ಯಾಚರಣೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.