ಲಕ್ನೋ: ಪ್ರೇಯಸಿ ಜೊತೆ ಲಾಂಗ್ಡ್ರೈವ್ ಹೋಗಲು ಕಾರಿಲ್ಲದೇ ಪರದಾಡುತ್ತಿದ್ದ ಸ್ನೇಹಿತನಿಗಾಗಿ, ಕಾರು ಕಳ್ಳತನ ಮಾಡಿ ಫ್ರೆಂಡ್ಸ್ ಸಹಾಯ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಶ್ರೇಯ್, ಅನಿಕೇತ್ ನಗರ್ ಹಾಗೂ ದೀಪಾಂಶು ಭಾಟಿ ಎಂದು ಗುರುತಿಸಲಾಗಿದೆ.
ಆದರೆ ಈ ಮೂವರ ಪೈಕಿ ಕಾರು ಕಳ್ಳತನಕ್ಕೆ ಯೋಜನೆ ರೂಪಿಸಿದ್ದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಕಳ್ಳತನದ ಕೆಲವು ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇಬ್ಬರು ಕಾಲೇಜು ವಿದ್ಯಾರ್ಥಿಗಳು ಅವರ ಸ್ನೇಹಿತ ಹಾಗೂ ಆತನ ಪ್ರೇಯಸಿಯೊಟ್ಟಿಗೆ ಲಾಂಗ್ಡ್ರೈವ್ ತೆರಳಲು ಕಾರಿಲ್ಲದೇ ಇದ್ದಾಗ ಸಹಾಯ ಮಾಡಲು ಮುಂದಾಗಿದ್ದರು. ಗ್ರೇಟರ್ ನೋಯ್ಡಾದ ಶೋರೂಮ್ ಒಂದರಲ್ಲಿ ಕಾರನ್ನು ಕಳ್ಳತನ ಮಾಡುವ ಯೋಜನೆ ಹಾಕಿದ್ದರು.
ಸೆ.26 ರಂದು ಇಬ್ಬರು ಆರೋಪಿಗಳು ಗ್ರೇಟರ್ ನೋಯ್ಡಾದ ಕಾರ್ ಬಜಾರ್ನಲ್ಲಿ ನಿಲ್ಲಿಸಿದ್ದ ಹುಂಡೈ ವೆನ್ಯೂ ಕಾರನ್ನು ಟೆಸ್ಟ್ ಡ್ರೈವ್ ಮಾಡಲು ಕೇಳಿದ್ದಾರೆ. ಈ ವೇಳೆ ಕಾರ್ ಡೀಲರ್ ನಿಲ್ಲಿಸಿದ್ದ ಕಾರನ್ನು ಪಾರ್ಕಿಂಗ್ನಿಂದ ಹೊರತೆಗೆದು ಇಬ್ಬರನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಕಾರ್ ಡೀಲರ್ ಕಾರನ್ನು ಓಡಿಸುತ್ತಿದ್ದ. ಇಬ್ಬರಲ್ಲಿ ಒಬ್ಬ ಮುಂದೆ ಹಾಗೂ ಇನ್ನೊಬ್ಬ ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದ. ಬಳಿಕ ಕಾರು ಅಲ್ಲಿಂದ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಲ್ಲಿಂದ ಕಾರು ಹೊರಟ ಬಳಿಕ ಇಬ್ಬರು ಆರೋಪಿಗಳು ಕಾರ್ ಡೀಲರ್ನನ್ನು ಹೊರಗೆ ತಳ್ಳಿ, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರಕರಣ ನಡೆದ ಬಳಿಕ 100ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರೀಕ್ಷಿಸಲಾಗಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ಹರಸಾಹಸಪಟ್ಟಿರುವುದಾಗಿ ತಿಳಿಸಿದ್ದಾರೆ. ಸದ್ಯ ಟಿಂಟೆಡ್ ಗ್ಲಾಸ್ ಮತ್ತು ನಗರ ಎಂದು ಬರೆದಿದ್ದ ಕಾರನ್ನು ಪೊಲೀಸರು ಪತ್ತೆ ಮಾಡಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ