ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ವಿಜಯದಶಮಿ ಮೆರವಣಿಗೆಗೂ ಮುನ್ನ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಸಿದರು.
ಮಧ್ಯಾಹ್ನ 1:41 ರಿಂದ 2:10ರ ವರೆಗೆ ಸಲ್ಲುವ ಮಕರ ಶುಭಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿದರು.
ಆ ಮೂಲಕ ದಸರಾ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಮೈಸೂರಿನ ಗೌರಿಶಂಕರ ನಗರದ ಉಡಿಗಾಲ ಮಹಾದೇವಪ್ಪ ಕುಟುಂಬದವರು ಕಳೆದ 9 ದಿನಗಳಿಂದ ಈ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ್ದು, ಇಂದು ಕೋಡಿ ಸೋಮೇಶ್ವರ ದೇವಾಲಯದಲ್ಲಿ ಜೋಡಣಾ ಕಾರ್ಯ ನಡೆಯುತ್ತಿದೆ.
ನಂದಿಧ್ವಜ ಪೂಜೆ ಆದ ಬಳಿಕ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ಕಟ್ಟುವ ಕಾರ್ಯ ನಡೆಯುತ್ತಿದೆ. ನಂತರ ಮೆರವಣಿಗೆಗೆ ಪುಷ್ಪಾರ್ಚನೆ ಮಾಡಿ ಸಿಎಂ ಚಾಲನೆ ನೀಡಲಿದ್ದಾರೆ.
ನಂದಿಪೂಜೆಯೊಂದಿಗೆ ವಿಜಯದಶಮಿ ಮೆರವಣಿಗೆಗೆ ಮುನ್ನುಡಿ ಬರೆಯಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಗಣೇಶ ಪ್ರಥಮ ಪೂಜಿತ. ಆದರೆ ಜಂಬೂಸವಾರಿಯಲ್ಲಿ ನಂದಿಗೆ ಅಗ್ರ ಪೂಜೆ. ನಂದಿಧ್ವಜಕ್ಕೆ ಪೂಜೆ ಮೂಲಕವೇ ದಸರಾ ಮೆರವಣಿಗೆಗೆ ಅಧಿಕೃತ ಚಾಲನೆ ನೀಡುವುದು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ಪೂಜೆ ನೆರವೇರಿತು. ಕಳೆದ 65 ವರ್ಷಗಳಿಂದ ಪೂಜೆ ನಡೆಸಲಾಗುತ್ತಿದೆ. ಗೌರಿಶಂಕರ ನಗರದ ನಂದಿಧ್ವಜ, ವೀರಗಾಸೆ ತಂಡದವರು ಭಾಗಿಯಾಗಿದ್ದಾರೆ.