ಟೀಮ್ ಇಂಡಿಯಾ ಕಂಡ ಅತ್ಯಂತ ಸ್ಟ್ರೈಲಿಷ್ ಆಟಗಾರರಲ್ಲಿ ಒಬ್ಬರಾದ ಎಡಗೈ ಆರಂಭಿಕ ಬ್ಯಾಟರ್ ಶಿಖರ್ ಧವನ್, ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಪಂಜಾಬ್ ತಂಡದ ಪೂರ್ಣ ಪ್ರಮಾಣದ ಕ್ಯಾಪ್ಟನ್ಸಿ ವಹಿಸಿಕೊಂಡಿರುವ ‘ಗಬ್ಬರ್’ ಖ್ಯಾತಿಯ ಅನುಭವಿ ಆಟಗಾರ ಇತ್ತೀಚಿನ ಸಂದರ್ಶನ ಒಂದರಲ್ಲಿ ಅಚ್ಚರಿಯ ಸಂಗತಿ ಒಂದನ್ನು ಬಾಯ್ಬಿಟ್ಟಿದ್ದಾರೆ. ತಮ್ಮ ಮೊದಲ ಟ್ಯಾಟೂ ಹಾಕಿಸಿಕೊಂಡ ದಿನವನ್ನು ಸ್ಮರಿಸಿದ ಶಿಖರ್, ಅದರಿಂದ ಎದುರಿಸಿದ್ದ ಪೇಚಿನ ಬಗ್ಗೆ ಹೇಳಿಕೊಂಡಿದ್ದಾರೆ.
ತಮ್ಮ 14-15ನೇ ವಯಸ್ಸಿನಲ್ಲಿ ಮನಾಲಿಗೆ ತೆರಳಿದ್ದ ಸಂದರ್ಭದಲ್ಲಿ ಮೊದಲ ಬಾರಿ ಟ್ಯಾಟೂ ಹಾಕಿಸಿಕೊಂಡಿದ್ದಾಗಿ ಶಿಖರ್ ಧವನ್ ಹೇಳಿಕೊಂಡಿದ್ದಾರೆ. ಬಳಿಕ ಆ ಸಂಗತಿಯನ್ನು ಮನೆಯವರಿಂದ 3-4 ತಿಂಗಳು ಬಚ್ಚಿಟ್ಟು, ಸೋಂಕು ತಗುಲಿರಬಹುದು ಎಂ<ದು ಹೆದರಿ ಎಚ್ಐವಿ ಟೆಸ್ಟ್ ಕೂಡ ಮಾಡಿಸಿದ್ದ ಘಟನೆಯನ್ನು ಇದೀಗ ಸ್ಮರಿಸಿದ್ದಾರೆ.
“ನನಗೆ 14-15 ವರ್ಷ ವಯಸ್ಸಿದ್ದಾಗ ಮನಾಲಿಗೆ ತೆರಳಿದ್ದೆ, ಕುಟುಂಬದವರಿಗೆ ತಿಳಿಸದೆ ನನ್ನ ಬೆನ್ನ ಮೇಲೆ ಟ್ಯಾಟೂ ಹಾಕಿಸಿದ್ದೆ. ಆದರೆ, ಅದನ್ನು ದೀರ್ಘ ಸಮಯ ಬಚ್ಚಿಟ್ಟುಕೊಳ್ಳಬೇಕಾಯಿತು. 3-4 ತಿಂಗಳು ಬಳಿಕ ನನ್ನ ತಂದೆ ಅದನ್ನು ಕಂಡು ಸರಿಯಾಗಿ ಪೆಟ್ಟು ಕೊಟ್ಟಿದ್ದರು. ಆಗ ಸಾಕಷ್ಟು ಹೆದರಿದ್ದೆ. ಏಕೆಂದರೆ ಆ ಟ್ಯಾಟೂ ಹಾಕಿದ್ದವರು ಅದೇ ಸೂಜಿಯನ್ನು ಎಷ್ಟು ಮಂದಿಗೆ ಚುಚ್ಚಿದ್ದರೊ ಎಂಬ ಹೆದರಿಕೆ ಶುರುವಾಯಿತು. ಎಚ್ಐವಿ ಟೆಸ್ಟ್ ಮಾಡಿಸಿದ ಬಳಿಕ ನೆಗೆಟೀವ್ ಎಂದು ತಿಳಿದ ನಂತರವಷ್ಟೇ ಮನಸ್ಸಿಗೆ ಸಮಾಧಾನ ಸಿಕ್ಕಿತ್ತು,” ಎಂದು ಆಜ್ ತಕ್ಗೆ ನೀಡಿರುವ ಸಂದರ್ಶನದಲ್ಲಿ ಶಿಖರ್ ಹೇಳಿಕೊಂಡಿದ್ದಾರೆ.