ಚೆನ್ನೈ: ಮಾರ್ಚ್ 31 ರಿಂದ 16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭವಾಗುತ್ತಿದ್ದು, ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Titans) ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿವೆ.
ಈಗಾಗಲೇ ಫ್ರಾಂಚೈಸಿಗಳು ತಮ್ಮ ತವರಿನಲ್ಲಿ ಅಭ್ಯಾಸ ಆರಂಭಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದೆ.
ಸೋಮವಾರ ಸಂಜೆ ನಡೆದ ಅಭ್ಯಾಸ ಪಂದ್ಯದ ವೇಳೆ 41 ವರ್ಷ ವಯಸ್ಸಿನ ಎಂ.ಎಸ್ ಧೋನಿ (MS Dhoni) ಚಿರ ಯುವಕನಂತೆ ಸಿಕ್ಸರ್ಗಳ ಸುರಿಮಳೆ ಸುರಿಸಿದ್ದಾರೆ. ಇದನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಧೋನಿ ಸಿಕ್ಸರ್ ಬಾರಿಸುತ್ತಿರುವ ವೀಡಿಯೋ ತುಣುಕನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಧೋನಿ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈವೆರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ನಲ್ಲಿ 4 ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕಳೆದ ಬಾರಿ ಪ್ಲೆ ಆಫ್ನಿಂದ ಹೊರಗುಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹಲವು ಆಟಗಾರರ ಬದಲಾವಣೆಯೊಂದಿಗೆ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. 16.25 ಕೋಟಿ ರೂ. ದುಬಾರಿ ಬೆಲೆಗೆ ಬಿಕರಿಯಾದ ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ಸ್ಟೋಕ್ಸ್ ಸಹ ಸಿಎಸ್ಕೆ ತಂಡಲ್ಲಿದ್ದು, ಆನೆಬಲ ಬಂದಂತಾಗಿದೆ.
ಅಲ್ಲದೇ ಈಗಾಗಲೇ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ಗಳಲ್ಲಿ ನಿವೃತ್ತಿಯಾಗಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಂ.ಎಸ್ ಧೋನಿ ಈ ಬಾರಿ ಕೊನೆಯ ಐಪಿಎಲ್ ಆಡಲಿದ್ದಾರೆ. ಆದ್ದರಿಂದ ಚೆನ್ನೈ ತಂಡ ಮಾಹಿಗೆ ಗೆಲುವಿನ ವಿದಾಯ ನೀಡಲು ಕಪ್ ಗೆಲ್ಲಲ್ಲೇಬೇಕೆಂದು ಪಣ ತೊಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್-11:
ಎಂ.ಎಸ್.ಧೋನಿ (ನಾಯಕ), ಡಿವೋನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಮ್ ದುಬೆ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಮಹೇಶ್ ತೀಕ್ಷಣ ಹಾಗೂ ಮುಖೇಶ್ ಛೌಧರಿ.
ಟೂರ್ನಿಗೆ ಸಿಎಸ್ಕೆ ತಂಡ:
ಎಂ.ಎಸ್ ಧೋನಿ (ನಾಯಕ), ಡಿವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಮುಖರ್ ದೇಶ್ಗಾವ್, ತುಷಾರ್ ದೇಶ್ಗಾವ್, ತುಷಾರ್ ದೇಶ್ಗಾವ್, , ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಶೇಕ್ ರಶೀದ್, ನಿಶಾಂತ್ ಸಿಧು, ಅಜಯ್ ಮಂಡಲ್, ಸಿಸಂದ ಮಗಳ.