ಎನ್ಸಿಪಿ ಹಿರಿಯ ಮುಖಂಡ, ಡಿಸಿಎಂ ಅಜಿತ್ ಪವಾರ್ ಆಪ್ತ ಹಾಗೂ ಬಾಲಿವುಡ್ ತಾರೆಯರ ಜೊತೆಗೆ ಉತ್ತಮ ಸ್ನೇಹ ಹೊಂದಿದ್ದ ರಾಜಕಾರಣಿ ಬಾಬಾ ಸಿದ್ದಿಕಿ ಅವರನ್ನು ಸುಪಾರಿ ಹಂತಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇವರ ಹತ್ಯೆಗೆ ಬಾಲಿವುಡ್ ಮಂದಿ ಬೆಚ್ಚಿ ಬಿದ್ದಿದ್ದಾರೆ. ಸಲ್ಮಾನ್ ಖಾನ್ ಗೆ ಹೆಚ್ಚು ಆಪ್ತರಾಗಿದ್ದ ಬಾಬಾ ಸಿದ್ದಿಕಿ ಕೊಲೆಯಿಂದ ಸಲ್ಮಾನ್ ಖಾನ್ ಕಂಗಲಾಗಿದ್ದಾರೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿರುವಾಗಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾರೆ. ಈ ಮಧ್ಯೆ ಮತ್ತೊಂದು ಪೋಸ್ಟ್ ವೈರಲ್ ಆಗಿದೆ.
ಲಾರೆನ್ಸ್ ಬಿಷ್ಣೋಯ್ಸ್ ಗ್ಯಾಂಗ್ನವರು ಎನ್ನಲಾದ ವ್ಯಕ್ತಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅದರ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಬಾಬಾ ಸಿದ್ಧಿಕಿ ಮತ್ತು ಸಲ್ಮಾನ್ ಖಾನ್ ನಡುವೆ ಆಪ್ತ ಒಡನಾಟ ಇತ್ತು. ಅನೇಕ ಸಂದರ್ಭಗಳಲ್ಲಿ ಬಾಬಾ ಸಿದ್ಧಿಕಿ ಮನೆಗೆ ಸಲ್ಲು ತೆರಳಿದ್ದರು. ಸಲ್ಮಾನ್ ಖಾನ್ಗೆ ಸಹಾಯ ಮಾಡಿದ್ದಕ್ಕಾಗಿ ಸಿದ್ಧಿಕಿಯ ಹತ್ಯೆ ನಡೆದಂತಿದೆ.
ಫೇಸ್ಬುಕ್ ಪೋಸ್ಟ್ ಮೂಲಕ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಲಾಗಿದೆ. ‘ಸಲ್ಮಾನ್ ಖಾನ್.. ನಮಗೆ ಈ ಯುದ್ಧ ಬೇಕಿರಲಲ್ಲ. ಆದರೆ ನೀವು ನಮ್ಮ ಸಹೋದರರ ಜೀವಕ್ಕೆ ಹಾನಿ ಮಾಡಿದ್ದೀರಿ. ಒಂದು ಸಮಯದಲ್ಲಿ ಬಾಬಾ ಸಿದ್ಧಿಕಿಗೆ ದಾವುದ್ ಜೊತೆ ಲಿಂಕ್ ಇತ್ತು. ಅನುಜ್ ತಾಪನ್, ದಾವುದ್, ಬಾಲಿವುಡ್, ರಾಜಕೀಯ ಮತ್ತು ಆಸ್ತಿ ಡೀಲ್ ಜೊತೆ ಸಿದ್ಧಿಕಿಗೆ ನಂಟು ಇದ್ದಿದ್ದರಿಂದ ಈ ಸಾವು’ ಎಂದು ಪೋಸ್ಟ್ ಮಾಡಲಾಗಿದೆ.
‘ನಮಗೆ ಯಾರ ಮೇಲೂ ದ್ವೇಷ ಇಲ್ಲ. ಸಲ್ಮಾನ್ ಖಾನ್ ಮತ್ತು ದಾವುದ್ ಗ್ಯಾಂಗ್ಗೆ ಯಾರೇ ಸಹಾಯ ಮಾಡಿದರೂ ಕೂಡ ಇಂಥದ್ದಕ್ಕೆ ಸಿದ್ಧರಾಗಿರಬೇಕು. ನಮ್ಮ ಸಹೋದರರನ್ನು ಕೊಂದರೆ ನಾವು ಪ್ರತಿಕ್ರಿಯಿಸುತ್ತೇವೆ. ಎಂದಿಗೂ ನಾವಾಗಿಯೇ ಮೊದಲು ದಾಳಿ ಮಾಡಿಲ್ಲ. ಜೈ ಶ್ರೀರಾಮ್, ಜೈ ಭಾರತ್’ ಎಂದು ಬರೆಯಲಾಗಿದೆ. ಈ ಬೆದರಿಕೆಯ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ನಿವಾಸದ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಬಾಬಾ ಸಿದ್ಧಿಕಿ ಅವರ ಅಂತ್ಯಕ್ರಿಯೆಯಲ್ಲಿ ಸಲ್ಮಾನ್ ಖಾನ್ ಭಾಗಿ ಆಗಿದ್ದು ಸದ್ಯದ ಮಟ್ಟಿಗೆ ಸಿನಿಮಾದ ಕೆಲಗಳಿಂದ ದೂರ ಉಳಿದಿದ್ದಾರೆ.