ಹಾಸ್ಯ ಪಾತ್ರಗಳ ಮೂಲಕ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅತುಲ್ ಪರ್ಚುರೆ ಕೊನೆಯುಸಿರೆಳೆದಿದ್ದಾರೆ.ಕಳೆದ ಕೆಲ ವರ್ಷಗಳಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅತುಲ್ ಪರ್ಚುರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. 57 ವರ್ಷದ ಅತುಲ್ ಪರ್ಚುರೆ ತಾಯಿ, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ಕಾಮಿಡಿ ಪಾತ್ರಗಳ ಮೂಲಕ ಅತುಲ್ ಖ್ಯಾತಿ ಗಳಿಸಿದ್ದರು.
ಮರಾಠಿ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅತುಲ್ ಪರ್ಚುರೆ ಸ್ವತಃ ಪ್ರತಿಭೆಯಿಂದ ಬಾಲಿವುಡ್ ಸಿನಿಮಾಗಳಲ್ಲೂ ಅವಕಾಶ ಪಡೆದರು. ‘ಕಲ್ಯುಗ್’, ‘ಗೋಲ್ಮಾಲ್’, ‘ಪಾರ್ಟ್ನರ್’, ‘ಬಿಲ್ಲು ಬಾರ್ಬರ್’, ‘ಆಲ್ ದಿ ಬೆಸ್ಟ್’, ‘ಆವಾರಪನ್’, ‘ಬುಡ್ಡ ಹೋಗ ತೇರಾ ಬಾಪ್’ ಮುಂತಾದ ಹಿಂದಿ ಸಿನಿಮಾಗಳಲ್ಲಿ ಅತುಲ್ ಪರ್ಚುರೆ ಅವರು ಅಭಿನಯಿಸಿದ್ದರು.
ಲಿವರ್ ಕ್ಯಾನ್ಸರ್ ಇರುವುದು ಗೊತ್ತಾಗ ಬಳಿಕ ಅತುಲ್ ಪರ್ಚುರೆ ಅವರ ವೃತ್ತಿಬದುಕಿಗೆ ಅಲ್ಪವಿರಾಮ ಬಿದ್ದಿತ್ತು. ಆದರೆ ಚಿಕಿತ್ಸೆ ಪಡೆದು ಅವರು ಮತ್ತೆ ನಟನೆಯಲ್ಲಿ ತೊಡಗಿಕೊಂಡಿದ್ದರು. ಸಿನಿಮಾಗಳ ಜೊತೆ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಅವರು ಹೆಸರು ಮಾಡಿದ್ದರು. ಶಾರುಖ್ ಖಾನ್, ಅಜಯ್ ದೇವಗನ್ ಮುಂತಾದ ಹಿಂದಿ ಚಿತ್ರರಂಗ ಸ್ಟಾರ್ ಕಲಾವಿದರ ಜೊತೆ ಅಭಿನಯಿಸಿ ಅತುಲ್ ಅವರು ಸೈ ಎನಿಸಿಕೊಂಡಿದ್ದರು.
ಕಪಿಲ್ ಶರ್ಮಾ ನಡೆಸಿಕೊಟ್ಟ ‘ಕಾಮಿಡಿ ನೈಟ್ಸ್ ವಿಥ್ ಕಪಿಲ್’ ಕಾರ್ಯಕ್ರಮದಲ್ಲಿ ಹಲವು ಪಾತ್ರಗಳನ್ನು ಮಾಡುವ ಮೂಲಕ ಅತುಲ್ ಪರ್ಚುರೆ ಅವರು ಅಭಿಮಾನಿಗಳನ್ನು ರಂಜಿಸಿದ್ದರು. ಆರೋಗ್ಯ ಸಮಸ್ಯೆ ಉಲ್ಬಣಿಸಿದ್ದರಿಂದ ಅವರ ವೃತ್ತಿ ಜೀವನಕ್ಕೆ ಪೆಟ್ಟು ಬಿದ್ದಿತ್ತು. ಆರಂಭದಲ್ಲಿ ಅವರಿಗೆ ಕ್ಯಾನ್ಸರ್ ಚಿಕಿತ್ಸೆ ಆರಂಭಿಸಿದ್ದಾಗ ವೈದ್ಯರಿಂದ ಎಡವಟ್ಟು ಆಗಿತ್ತು. ಇರುವ ಸಮಸ್ಯೆ ಇನ್ನಷ್ಟು ಜಾಸ್ತಿ ಆಗಿತ್ತು. ವೈದ್ಯರನ್ನು ಬದಲಿಸಿದ ಬಳಿಕ ಅವರು ಕೊಂಚ ಚೇತರಿಸಿಕೊಂಡಿದ್ದರು. ಆದರೆ ಇದೀಗ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದು ಚಿತ್ರರಂಗದ ಹಲವರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.