ಚಂಡೀಗಢ: ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಮೂರು ಡ್ರೋನ್ಗಳನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ಗಳನ್ನು ಹೊಡೆದುರುಳಿಸಿದ ಸ್ಥಳಗಳಿಂದ ಸುಮಾರು 10 ಕೆ.ಜಿ ಹೆರಾಯಿನ್, ಪಿಸ್ತೂಲ್ ಮತ್ತು ಮ್ಯಾಗಜಿನ್ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
‘ಅಮೃತಸರದ ರಜತಾಲ್ ಗ್ರಾಮದಲ್ಲಿ ಸೋಮವಾರ ಸಂಜೆ 8.30ರ ಸುಮಾರಿಗೆ ಪಾಕಿಸ್ತಾನದ ಡ್ರೋನ್ ಹಾರಾಡುತ್ತಿರುವುದು ಪತ್ತೆಯಾಗಿತ್ತು. ಕೂಡಲೇ ಬಿಎಸ್ಎಫ್ ಸಿಬ್ಬಂದಿ ಅದನ್ನು ಹೊಡೆದುರುಳಿಸಿದರು. ಈ ಜಾಗದಲ್ಲಿ ಶೋಧ ನಡೆಸಿದಾಗ ಕಪ್ಪು ಬಣ್ಣದ ಡ್ರೋನ್ ಪತ್ತೆಯಾಗಿತ್ತು. ಅದರೊಳಗೆ ಹೆರಾಯಿನ್ ಪ್ಯಾಕೆಟ್ಗಳು (2.6 ಕೆ.ಜಿ ) ಕಂಡುಬಂದವು’ ಎಂದು ವಕ್ತಾರರು ತಿಳಿಸಿದ್ದಾರೆ.
‘ಅದೇ ದಿನ ರಾತ್ರಿ ಅಮೃತಸರದ ಬಚಿವಿಂದ್ ಗ್ರಾಮದಲ್ಲಿ ಹಾರಾಡುತ್ತಿದ್ದ ಮತ್ತೊಂದು ಡ್ರೋನ್ ಅನ್ನು ಯೋಧರು ಹೊಡೆದುರುಳಿಸಿದ್ದು, ಅದರಲ್ಲೂ ಮೂರು ಕೆ.ಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಹಾಗೆಯೇ, ‘ಹರ್ದೊ ರತ್ತನ್ ಗ್ರಾಮದಲ್ಲಿ ಮತ್ತೊಂದು ಡ್ರೋನ್ ಅನ್ನು ಯೋಧರು ಹೊಡೆದುರುಳಿಸಿದ್ದಾರೆ. ಬಳಿಕ ಆ ಪ್ರದೇಶದಲ್ಲಿ 2 ಕೆ.ಜಿ ಹೆರಾಯಿನ್ ಪತ್ತೆಯಾಗಿದೆ’ ಎಂದಿದ್ದಾರೆ.
‘ಫಾಝಿಲ್ಕಾ ಜಿಲ್ಲೆಯ ಗಡಿಯುದ್ದಕ್ಕೂ ಹೆರಾಯಿನ್ ಪ್ಯಾಕ್ಗಳನ್ನು ಎಸೆಯುತ್ತಿದ್ದವರ ಮೇಲೆ ಬಿಎಸ್ಎಫ್ ಯೋಧರು ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳು ಪರಾರಿಯಾಗಿದ್ದು, ಸ್ಥಳದಿಂದ ಎರಡು ಕೆ.ಜಿ ಮಾದಕವಸ್ತು, ಚೀನಾ ನಿರ್ಮಿತ ಪಿಸ್ತೂಲ್, ಮ್ಯಾಗಜಿನ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.