‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭವಾಗಿ ಎರಡು ವಾರಗಳಾಗಿದೆ. ಮೊದಲ ವಾರದಲ್ಲಿ ಯಮನ ಶ್ರೀನಿಧಿ ಮನೆಯಿಂದ ಹೊರ ಹೋಗಿದ್ದರು. ಎರಡನೇ ವಾರದಲ್ಲಿ ಯಾವುದೇ ಎಲಿಮಿನೇಷನ್ ಆಗಿಲ್ಲ. ಈ ರೀತಿಯ ಘಟನೆ ನಡೆದಾಗ ಬಿಗ್ ಬಾಸ್ ಏನಾದರೊಂದು ಟ್ವಿಸ್ಟ್ ನೀಡುತ್ತಾರೆ. ಇದೀಗ ಅದೇ ರೀತಿಯ ಎಚ್ಚರಿಕೆಯನ್ನು ಬಿಗ್ ಬಾಸ್ ನೀಡಿದ್ದಾರೆ. ಈ ವಾರ ಯಾರು ಯಾವಾಗ ಬೇಕಿದ್ದರೂ ಮನೆಯಿಂದ ಹೊರಕ್ಕೆ ಹೋಗಬಹುದು ಎಂದು ಹೇಳುವ ಮೂಲಕ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ನವರಾತ್ರಿಯ ಸಮಯದಲ್ಲಿ ಯಾರನ್ನೂ ಹೊರಕ್ಕೆ ಕಳುಹಿಸಿಲ್ಲ. ಈ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಈ ವಾರ ಎರಡು ಎಲಿಮಿನೇಷನ್ ನಡೆಯೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ವಿಚಾರದಿಂದ ಮನೆ ಮಂದಿಗೆ ಈಗಾಗಲೇ ಟೆನ್ಷನ್ ಶುರುವಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ಕ್ಯಾಪ್ಟನ್ ಆಗಿ ಶಿಶಿರ್ ಆಯ್ಕೆಗೊಂಡಿದ್ದಾರೆ. ಅವರು ಪ್ರತಿ ನಿರ್ಧಾರವನ್ನು ಸಾಕಷ್ಟು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಿದೆ. ಅದೇ ರೀತಿ ನೇರ ನಾಮಿನೇಷನ್ಗೆ ಅವರಿಗೆ ಅಧಿಕಾರ ನೀಡಲಾಗಿದೆ. ಈ ಅಧಿಕಾರವನ್ನು ಅವರು ಬಳಕೆ ಮಾಡಿಕೊಂಡು ಮೊದಲು ಅನುಷಾ ಅವರನ್ನು ನಾಮಿನೇಟ್ ಮಾಡಿದರು. ಆ ಬಳಿಕ ಧನರಾಜ್, ಜಗದೀಶ್ ಹಾಗೂ ಹಂಸ ಅವರನ್ನು ನಾಮಿನೇಟ್ ಮಾಡಿದರು.
ಧನರಾಜ್, ಹಂಸ, ಜಗದೀಶ್ ಅವರನ್ನು ನಾಮಿನೇಟ್ ಮಾಡಿದ ಬಳಿಕ, ‘ಇದು ನೇರ ನಾಮಿನೇಷನ್ ಅಲ್ಲ. ಗೇಮ್ ಆಡಿ ಗೆಲ್ಲೋಕೆ ಎರಡನೇ ಅವಕಾಶ ಇರುತ್ತದೆ’ ಎಂದು ಬಿಗ್ ಬಾಸ್ ಹೇಳಿರೋದಾಗಿ ಶಿಶಿರ್ ಎಲ್ಲರ ಎದುರು ವಿವರಣೆ ನೀಡಿದರು. ಈ ವಿವರಣೆಯ ಬಳಿಕ ಬಿಗ್ ಬಾಸ್, ಶಿಶಿರ್ ಅವರನ್ನು ಕರೆಸಿ, ‘ನಾನೆಲ್ಲಿ ಗೇಮ್ ಆಡಿ ಗೆಲ್ಲೋಕೆ ಎರಡನೇ ಅವಕಾಶ ಇರುತ್ತದೆ ಎಂದು ಹೇಳಿದೆ’ ಎಂದು ಪ್ರಶ್ನೆ ಮಾಡಿದರು.
‘ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಹೀಗಾಗಿ, ಈ ವಾರ ಯಾರು ಯಾವಾಗ ಹೊರಕ್ಕೆ ಹೋಗುತ್ತಾರೆ ಎಂದು ಹೇಳೋಕಾಗಲ್ಲ’ ಎಂದು ಬಿಗ್ ಬಾಸ್ ಹೇಳಿದರು.