ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಲು ಆದೇಶಿಸಿದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ನನ್ನು ಇಸ್ರೇಲಿ ಸೇನೆ ಕಾರ್ಯಾಚರಣೆಯಲ್ಲಿ ಸಾಯಿಸಲಾಗಿದೆ ಎಂದು ಇಸ್ರೇಲಿ ರಕ್ಷಣಾ ಪಡೆ ಅಧಿಕೃತ ಮಾಹಿತಿ ನೀಡಿದೆ.
ಅಕ್ಟೋಬರ್ 7 ರ ದಾಳಿಯಲ್ಲಿ 1,200 ಇಸ್ರೇಲಿಗಳು ಮೃತಪಟ್ಟಿದ್ದು. ಇದು ಯಹೂದಿ ದೇಶದ ಮೇಲೆ ನಡೆದ ಅತ್ಯಂತ ಮಾರಣಾಂತಿಕ ಭಯೋತ್ಪಾದಕ ದಾಳಿಯಾಗಿತ್ತು.ಅಲ್ಲದೆ, ಇಡೀ ಮಧ್ಯಪ್ರಾಚ್ಯದಲ್ಲಿ ಶಾಂತಿ ಕದಡಲು ಕಾರಣವಾಗಿತ್ತು. “ಗಾಜಾದಲ್ಲಿ IDF ಕಾರ್ಯಾಚರಣೆಗಳ ಸಮಯದಲ್ಲಿ, ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಯಿತು. IDF ಮತ್ತು ISA [ಇಸ್ರೇಲ್ ಸೆಕ್ಯುರಿಟೀಸ್ ಅಥಾರಿಟಿ] ಭಯೋತ್ಪಾದಕರಲ್ಲಿ ಒಬ್ಬರು ಯಾಹ್ಯಾ ಸಿನ್ವಾರ್ ಆಗಿದ್ದಾರೆ ಎಂದಿದೆ. ಈ ಹಂತದಲ್ಲಿ, ಭಯೋತ್ಪಾದಕರ ಗುರುತನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ’ ಎಂದು ಐಡಿಎಫ್ ತಿಳಿಸಿದೆ. ಈ ಹತ್ಯೆಯ ಹಿಂದಿದ್ದ ಮಾಸ್ಟರ್ ಮೈಂಡ್ ಯಾಹ್ಯಾ ಸಿನ್ವಾರ್ ವಿರುದ್ಧ ಇಸ್ರೇಲ್ ಸೇಡು ತೀರಿಸಿಕೊಂಡಿದೆ.
“ಒಂದು ವರ್ಷದ ಅನ್ವೇಷಣೆಯ ನಂತರ ನಮ್ಮ ಹಮಾಸ್ ಭಯೋತ್ಪಾದಕ ಸಂಘಟನೆಯ ನಾಯಕ ಯಾಹ್ಯಾ ಸಿನ್ವಾರ್ನನ್ನು ದಕ್ಷಿಣ ಗಾಜಾ ಪಟ್ಟಿಯ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ್ದಾರೆ” ಎಂದು ಇಸ್ರೇಲ್ ಮಿಲಿಟರಿ ದೃಢಪಡಿಸಿತು. ಆದರೆ, ಅವರ ಸಾವನ್ನು ಹಮಾಸ್ ಇನ್ನೂ ದೃಢಪಡಿಸಿಲ್ಲ.
ಅಕ್ಟೋಬರ್ 7ರ ದಾಳಿಯ ಮಾಸ್ಟರ್ ಮೈಂಡ್ ಸಿನ್ವಾರ್ ಎಂದು ಇಸ್ರೇಲ್ ಆರೋಪಿಸಿದೆ. ಇದು ಇಸ್ರೇಲಿ ಇತಿಹಾಸದಲ್ಲಿ ಅತ್ಯಂತ ಮಾರಕವಾದ ದಾಳಿಯಾಗಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಇತರ ಇರಾನ್ ಬೆಂಬಲಿತ ಆಪರೇಟಿವ್ ಕಮಾಂಡರ್ಗಳು ಸಹ ಕೊಲ್ಲಲ್ಪಟ್ಟಿದ್ದಾರೆ. ಹಮಾಸ್ನ ಸೇನಾ ಮುಖ್ಯಸ್ಥ ಮೊಹಮ್ಮದ್ ಡೀಫ್ನನ್ನು ಕೊಂದಿರುವುದಾಗಿ ಇಸ್ರೇಲ್ ಈ ವರ್ಷದ ಆರಂಭದಲ್ಲಿ ಹೇಳಿತ್ತು. ಆದರೂ ಪ್ಯಾಲೆಸ್ತೀನ್ ಗುಂಪು ಅದನ್ನು ದೃಢಪಡಿಸಿರಲಿಲ್ಲ.
ಇತ್ತೀಚೆಗೆ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಹತ್ಯೆ ಮಾಡಿತ್ತು. ಇದೀಗ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ನನ್ನು ಕೊಂದಿರುವುದಾಗಿ ಹೇಳಿಕೊಂಡಿದೆ.
ಯಾಹ್ಯಾ ಸಿನ್ವಾರ್, ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಗಾಜಾ ಮೆಟ್ರೋ ಎಂದೂ ಕರೆಯಲ್ಪಡುವ ಗಾಜಾದ ಸುರಂಗಗಳಲ್ಲಿ ಅಡಗಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. “ಈ ಹಂತದಲ್ಲಿ, ಭಯೋತ್ಪಾದಕರ ಗುರುತನ್ನು ದೃಢೀಕರಿಸಲು ಸಾಧ್ಯವಿಲ್ಲ” ಎಂದು ಇಸ್ರೇಲಿ ಮಿಲಿಟರಿ ವರದಿ ಮಾಡಿದೆ ಎಂದು ರಾಯಿಟರ್ಸ್ ತಿಳಿಸಿದೆ. ಇಸ್ರೇಲ್ನ ಕಾನ್ ರೇಡಿಯೋ ಹಮಾಸ್ ನಾಯಕನನ್ನು “ಆಕಸ್ಮಿಕವಾಗಿ” ಕೊಲ್ಲಲಾಯಿತು ಎಂದು ವರದಿ ಮಾಡಿದೆ. ಆತ ಅಲ್ಲಿದ್ದಾನೆ ಎನ್ನುವ ಬಗ್ಗೆ ಯಾವುದೇ ಗುಪ್ತಚರ ಮಾಹಿತಿಯೂ ಇರಲಿಲ್ಲ ಎಂದು ತಿಳಿಸಿದೆ.