ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಾಯಿ ಸರೋಜ ಅನಾರೋಗ್ಯದಿಂದ ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜ ಅವರು ಚಿಕತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಅವರು ತಮ್ಮ ತಾಯಿ ಜತೆಗೆ ಕಳೆದಿರುವ ಸಂತಸದ ಕ್ಷಣಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸುದೀಪ್ ಅವರಿಗೆ ತಂದೆ ತಾಯಿ ಎಂದರೆ ತುಂಬಾ ಪ್ರೀತಿ. ಅದರಲ್ಲೂ ತಾಯಿ ಮೇಲೆ ಪ್ರೀತಿ ತುಸು ಹೆಚ್ಚಾಗಿಯೇ ಇದೆ. ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ತೆರಳಿದ್ದು ಸುದೀಪ್ ಈ ವೇಳೆ ತಮ್ಮ ತಾಯಿಯ ಕುರಿತು ಮಾತನಾಡಿದ್ದರು.
ಕಿಚ್ಚ ಸುದೀಪ್ ಅವರ ತಾಯಿ ಮೂಲತಃ ಮಂಗಳೂರಿನವರು. ಈ ಬಗ್ಗೆ ಸ್ವತಃ ಕಿಚ್ಚ ಅವರು ಹೇಳಿಕೊಂಡಿದ್ದರು. ಶಿವಮೊಗ್ಗ ಜಿಲ್ಲೆಯ ಸಂಜೀವ್ ಮಂಜಪ್ಪ ಸುದೀಪ್ ತಂದೆ.
ಸುದೀಪ್ ತಂದೆ ಸಂಜೀವ್ ಮಂಜಪ್ಪ ಅವರು ಹೋಟೆಲ್ ಉದ್ಯಮದ ಜತೆಗೆ ಸಿನಿಮಾ ನಿರ್ಮಾಪರಾಗಿಯೂ ಖ್ಯಾತಿ ಪಡೆದಿದ್ದರು. ಸುದೀಪ್ ಅವರಿಗೆ ಸುಜಾತಾ ಸುರೇಖಾ ಸಹೋದರಿಯರು ಇದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುದೀಪ್ ಅವರು ಅಮ್ಮನ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಅಲ್ಲದೆ ಸುದೀಪ್ ಹೇಗಿದ್ರು ಅನ್ನೋದನ್ನ ಅಮ್ಮ ಸರೋಜ ಹೇಳಿಕೊಂಡಿದ್ದರು. ಸುದೀಪ್ ಮೂಲ ಹೆಸರು ದೀಪಕ್ ಎಂದು. ಸುದೀಪ್ ಅವರನ್ನು ಮನೆಯವರು ಇಂದಿಗೂ ದೀಪು ಅಂತಲೇ ಕರೆಯುತ್ತಾರೆ.
ಕಿಚ್ಚ ಸುದೀಪ್ ಅವರು ಅಮ್ಮನಿಗೆ ಒಂದು ಸ್ಪೆಷಲ್ ಉಡುಗೊರೆಯನ್ನು ನೀಡಿದ್ದರು. 7ನೇ ತರಗತಿ ಇದ್ದಾಗ ಅಮ್ಮನಿಗೆ ಸೀರೆ ಕೊಟ್ಟಿದ್ದರಂತೆ. ದೆಹಲಿಗೆ ಹೋಗಿದ್ದಾಗ ಅಮ್ಮನಿಗೆ ಅಂತ ಕಿಚ್ಚ ಸುದೀಪ್ ಅವರು ಪಾಕೆಟ್ ಮನಿ ಸೇವ್ ಮಾಡಿಕೊಂಡು ಸೀರೆ ತೆಗೆದುಕೊಂಡು ಬಂದಿದ್ದರಂತೆ. ಈ ವಿಚಾರವನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುದೀಪ್ ಅವರು ಹೇಳಿಕೊಂಡಿದ್ದರು.
ಸರೋಜ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪಾರ್ಥಿವ ಶರೀರವನ್ನ ಜೆಪಿ ನಗರದ ಸುದೀಪ್ ನಿವಾಸಕ್ಕೆ ತರಲಾಗಿದೆ.