ವಾರದ ಹಿಂದೆ ಇಸ್ರೇಲ್ ಸೇನೆಯಿಂದ ಹತ್ಯೆಗೀಡಾದ ಹಮಾಸ್ ನಾಯಕ ಯಹ್ಯಾ ಸಿನ್ವರ್ ನ ಮತ್ತೊಂದು ವಿಡಿಯೋವನ್ನು ಇಸ್ರೇಲ್ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಹಮಾಸ್ ಬಂಡುಕೋರರು ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಆರಂಭಿಸುವ ಮುನ್ನ ಯಹ್ಯಾ ಸಿನ್ವರ್ ಗಾಜಾದ ಸುರಂಗದಲ್ಲಿ ದೀರ್ಘ ಕಾಲ ತಂಗಲು ತಯಾರಿ ನಡೆಸಿದ್ದ ವಿಡಿಯೊವನ್ನು ಇದೀಗ ಬಿಡುಗಡೆ ಮಾಡಲಾಗಿದೆ.
ಇಸ್ರೇಲ್ ಮೇಲಿನ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿದ್ದ ಸಿನ್ವರ್ ಅವರನ್ನು ಇಸ್ರೇಲ್ ಸೇನೆ ಕಳೆದ ವಾರ ಹತ್ಯೆ ಮಾಡಿತ್ತು. ಆತನ ಕೊನೆಯ ಕ್ಷಣಗಳ ವಿಡಿಯೊವನ್ನು ಈ ಹಿಂದೆ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಲಾಗಿದೆ.
ಸದ್ಯ ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ಸಿನ್ವರ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸುರಂಗದೊಳಗೆ ತೆರಳುತ್ತಿರುವ ದೃಶ್ಯವಿದೆ. ‘ಗಾಜಾ ಪಟ್ಟಿಯ ಖಾನ್ ಯೂನಿಸ್ನಲ್ಲಿರುವ ಅವರ ಮನೆಯ ಕೆಳಗಡೆ ಇರುವ ಸುರಂಗ ಅದಾಗಿದೆ’ ಎಂದು ವಿಡಿಯೊ ಬಿಡುಗಡೆಗೊಳಿಸಿದ ಇಸ್ರೇನ್ ಸೇನೆಯ ವಕ್ತಾರ ಅಡ್ಮಿರಲ್ ಡೇನಿಯಲ್ ಹಗರಿ ತಿಳಿಸಿದ್ದಾರೆ.
‘ಹಮಾಸ್ ನಡೆಸಿದ ಹತ್ಯಾಕಾಂಡಕ್ಕೆ ಕೆಲವೇ ಗಂಟೆಗಳ ಮೊದಲು, 2023ರ ಅಕ್ಟೋಬರ್ 6ರ ರಾತ್ರಿ ಸಿನ್ವರ್ ಮತ್ತು ಅವರ ಕುಟುಂಬದ ಸದಸ್ಯರು ಮನೆಯ ಕೆಳಗಿರುವ ಸುರಂಗದಲ್ಲಿ ಅಡಗಿಕೊಳ್ಳುವುದನ್ನು ನೀವು ನೋಡಬಹುದು’ ಎಂದು ಅವರು ವಿಡಿಯೊ ದೃಶ್ಯ ತೋರಿಸುತ್ತಾ ಹೇಳಲಾಗಿದೆ.
‘ಯುದ್ಧ ಆರಂಭವಾದ ಬಳಿಕ ಕಳೆದ ಒಂದು ವರ್ಷದಲ್ಲಿ ಇಸ್ರೇಲ್ ಸೇನೆಯ ಕೈಗೆ ಸಿಕ್ಕಿ ಬೀಳುವುದರಿಂದ ಹಲವು ಸಲ ಅಲ್ಪದರಲ್ಲೇ ಸಿನ್ವರ ಪಾರಾಗಿದ್ದನು. ಆತನ ಸಾಕಷ್ಟು ಸಮಯವನ್ನು ಖಾನ್ ಯೂನಿಸ್ ಮತ್ತು ರಫಾ ಪಟ್ಟಣದ ನಡುವೆ ಇರುವ ಸುರಂಗದಲ್ಲಿ ಕಳೆದಿದ್ದಾನೆ ಎಂದು ಹೇಳಲಾಗಿದೆ.
‘ಸಿನ್ವರ್ ಮತ್ತು ಅವರ ಮಗ ಹಲವು ಸಲ ಅತ್ತಿತ್ತ ಹೋಗುವ ದೃಶ್ಯ ವಿಡಿಯೊದಲ್ಲಿದೆ. ಆಹಾರ, ನೀರು, ಹಾಸಿಗೆ, ದಿಂಬುಗಳು, ಟಿ.ವಿ ಮತ್ತು ಇತರ ಅಗತ್ಯ ವಸ್ತುಗಳನ್ನು ಸುರಂಗಕ್ಕೆ ಕೊಂಡೊಯ್ದು ಅಲ್ಲಿ ದೀರ್ಘ ಕಾಲ ಉಳಿದುಕೊಳ್ಳಲು ತಯಾರಿ ನಡೆಸಿದ್ದರು’. ಆದರೆ ಕೊನೆಗೂ ಯಹ್ಯಾ ಇಸ್ರೇಲ್ ಸೇನೆಯಿಂದ ಹತನಾಗಿದ್ದಾನೆ.