ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಸದುಪಯೋಗವನ್ನು ರಾಜ್ಯದ ಮಹಿಳೆಯರು ಪಡೆಯುತ್ತಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಈ ಹಣದಿಂದ ಸಾಕಷ್ಟು ಪ್ರಯೋಜನವಾಗಿದೆ. ಅದೇ ರೀತಿ ಗೃಹಲಕ್ಷ್ಮಿ ಹಣದಿಂದ B.Ed 4ನೇ ಸೆಮಿಸ್ಟರ್ ಪರೀಕ್ಷೆಯ ಶುಲ್ಕವನ್ನ ಕಟ್ಟಿದೆ ಎಂಬ ವಿದ್ಯಾರ್ಥಿಯೊಬ್ಬನ ಪೋಸ್ಟ್ಗೆ ಸಿಎಂ ಸಿದ್ದರಾಮಯ್ಯ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬಡತನದಲ್ಲೂ ಕಲಿಕೆಯೆಡೆಗಿನ ಈ ಯುವಕನ ಹಂಬಲ ಕಂಡು ನನಗೆ ಖುಷಿಯಾಯಿತು. ಗೃಹಲಕ್ಷ್ಮಿ ಯೋಜನೆ ನಿಜವಾಗಿ ತಲುಪಬೇಕಿರುವುದು ಮತ್ತು ತಲುಪುತ್ತಿರುವುದು ಇಂತಹ ಜನರನ್ನೇ ಎಂದು ಅವರು ಎಕ್ಷ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗೃಹಲಕ್ಷ್ಮಿ ಹಣದಿಂದ B.Ed 4ನೇ ಸೆಮಿಸ್ಟರ್ ಪರೀಕ್ಷೆಯ ಶುಲ್ಕವನ್ನ ಕಟ್ಟಿದೆ. ಕುಟುಂಬ ಸಾಲದ ಸುಳಿಯಲ್ಲಿದೆ ತಂದೆ ಬಳಿ ಹಣ ಕೇಳೋಕೆ ಆಗದೆ ತಾಯಿ ಉಳಿಸಿಟ್ಟಿದ್ದ ಯೋಜನೆಯ ಹಣ ಸಹಾಯಕ್ಕೆ ಬಂದಿದೆ. ಸಂಕಷ್ಟದ ಸಮಯದಲ್ಲಿ ನನ್ನನ್ನ ಕಾಪಾಡಿದೆ. ಸಿದ್ದರಾಮಯ್ಯ ಅವ್ರಿಗೆ ಎಷ್ಟ್ ಧನ್ಯವಾದ ಹೇಳಿದ್ರು ಸಾಲಲ್ಲ ಎಂದು ವಿದ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಇದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಟ್ಯಾಗ್ ಮಾಡಿದ್ದ.
ಈ ಪೋಸ್ಟ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಬಡತನದ ಕಾರಣಕ್ಕಾಗಿ ಶಿಕ್ಷಣ ವಂಚಿತರಾಗಿರುವ ಮಕ್ಕಳನ್ನು ನನ್ನ ಬಾಲ್ಯದಿಂದಲೂ ನೋಡುತ್ತಾ ಬಂದಿದ್ದೇನೆ, ಇಂದಿಗೂ ನಮ್ಮ ನಡುವೆ ಅಂತಹಾ ಉದಾಹರಣೆಗಳು ಸಾಕಷ್ಟು ಸಿಗಲಿವೆ. ಸ್ವತಃ ನಾನೇ ನನ್ನಿಷ್ಟದ ಕಾನೂನು ವ್ಯಾಸಂಗಕ್ಕಾಗಿ ನಡೆಸಿದ ಹೋರಾಟ ಈ ಕ್ಷಣ ನೆನಪಾಗುತ್ತಿದೆ ಎಂದು ಹೇಳಿದ್ದಾರೆ.
ಅಂದು ಯಾವುದೋ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸಿ, ಕೃಷಿಯಲ್ಲಿ ತೊಡಗಿಕೊಂಡಿದ್ದರೆ ಇಂದು ಮುಖ್ಯಮಂತ್ರಿಯಾಗಿ ಕೋಟ್ಯಂತರ ಕನ್ನಡಿಗರ ಸೇವೆ ಮಾಡುವ ಭಾಗ್ಯ ನನ್ನದಾಗುತ್ತಿರಲಿಲ್ಲ ಎಂದು ಅವರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಬಡತನದಲ್ಲೂ ಕಲಿಕೆಯೆಡೆಗಿನ ಈ ಯುವಕನ ಹಂಬಲ ಕಂಡು ನನಗೆ ಖುಷಿಯಾಯಿತು. ಗೃಹಲಕ್ಷ್ಮಿ ಯೋಜನೆ ನಿಜವಾಗಿ ತಲುಪಬೇಕಿರುವುದು ಮತ್ತು ತಲುಪುತ್ತಿರುವುದು ಇಂತಹ ಜನರನ್ನೆ.ತನಗೆ ಬಂದ ಗೃಹಲಕ್ಷ್ಮಿಯ ಹಣವನ್ನು ಕಡುಬಡತನದಲ್ಲೂ ಕೂಡಿಟ್ಟು ಮಗನ ಶಿಕ್ಷಣಕ್ಕಾಗಿ ಕೊಟ್ಟ ಆ ತಾಯಿಯ ಪ್ರೀತಿ – ಕಾಳಜಿಗೆ ಧನ್ಯವಾದ. ಬಿ.ಇಡಿ ಶಿಕ್ಷಣ ಮುಗಿಸಿ ಶಿಕ್ಷಕನಾಗಿ ನೂರಾರು ಮಕ್ಕಳ ಬದುಕು ರೂಪಿಸುವಂತಾಗು. ಇಂದು ನೀನು ಧನ್ಯವಾದ ತಿಳಿಸಿದ್ದಕ್ಕಿಂತ ಹೆಚ್ಚು ಖುಷಿ ಅಂದು ನನಗಾಗಲಿದೆ ಎಂದು ಹೇಳಿದ್ದಾರೆ.