ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಔಪಚಾರಿಕವಾಗಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದಾರೆ. ಸುಪ್ರಿಂಕೋರ್ಟ್ನಲ್ಲಿ ವಕೀಲೆಯಾಗಿರುವ ಬಾನ್ಸುರಿ ಅವರಿಗೆ ದಿಲ್ಲಿ ಬಿಜೆಪಿಯ ಕಾನೂನು ಘಟಕದಲ್ಲಿ ಮಹತ್ತರ ಹೊಣೆ ನೀಡಲಾಗಿದೆ. ಈ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಹಿರಿಯ ನಾಯಕಿಯ ಪುತ್ರಿಯನ್ನು ದಿಲ್ಲಿ ಬಿಜೆಪಿಯ ಕಾನೂನು ಘಟಕದ ಸಹ ಸಂಚಾಲಕಿಯನ್ನಾಗಿ ಕೂಡ ನೇಮಿಸಲಾಗಿದೆ.
ದಿಲ್ಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್ದೇವ್ ಅವರು ಬಾನ್ಸುರಿ ಸ್ವರಾಜ್ ಅವರನ್ನು ಕಾನೂನು ಘಟಕದ ಸಹ ಸಂಚಾಲಕಿಯಾಗಿ ನೇಮಕಗೊಳಿಸಿದ್ದು, ಸ್ವರಾಜ್ ಪುತ್ರಿಯ ಸೇರ್ಪಡೆಯಿಂದ ಬಿಜೆಪಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾರಿದು ಬಾನ್ಸುರಿ?
ಕಳೆದ 16 ವರ್ಷಗಳಿಂದ ಕಾನೂನು ವೃತ್ತಿಯಲ್ಲಿರುವ ಬಾನ್ಸುರಿ ಅವರು ಆಕ್ಸ್ಫರ್ಡ್ ವಿವಿ ಪದವೀಧರೆಯಾಗಿದ್ದಾರೆ. ಈ ಹಿಂದಿನಿಂದಲೂ ಅವರು ಪಕ್ಷಕ್ಕೆ ಅನೌಪಚಾರಿಕವಾಗಿ ಕಾನೂನು ಮತ್ತಿತರ ವಲಯಗಳಲ್ಲಿ ನೆರವಾಗುತ್ತಿದ್ದರು. ಈಗ ಅವರಿಗೆ ಸಂಘಟನೆಯಲ್ಲಿ ಹುದ್ದೆ ನೀಡಲಾಗಿದೆ. ಈ ಮೂಲಕ ಬಾನ್ಸುರಿ ಅವರನ್ನು ರಾಜಧಾನಿ ದಿಲ್ಲಿಯ ರಾಜಕಾರಣದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು ಬಿಜೆಪಿ ಉದ್ದೇಶಿಸಿದೆ ಎಂಬ ಸುಳಿವು ದೊರಕಿದೆ.
ಮಾರ್ಚ್ 24ರಂದು ಬಾನ್ಸುರಿ ಅವರಿಗೆ ನೇಮಕಾತಿ ಪತ್ರವನ್ನು ಕಳುಹಿಸಲಾಗಿದೆ. ತಕ್ಷಣದಿಂದಲೇ ನಿಮ್ಮನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಅದರಲ್ಲಿ ಹೇಳಲಾಗಿದೆ. ದಿಲ್ಲಿ ಬಿಜೆಪಿ ಮುಖ್ಯಸ್ಥರಾಗಿ ನೇಮಕಗೊಂಡ ಬಳಿಕ ಸಚ್ದೇವ್ ಅವರು ಮಾಡಿರುವ ಮೊದಲ ನೇಮಕ ಇದಾಗಿದೆ.
ಸ್ವರಾಜ್ ಕೌಶಲ್, ಸುಷ್ಮಾ ಸ್ವರಾಜ್ ಮಗಳಾಗಿ 1984 ಜನವರಿ 3 ರಂದು ಜನಿಸಿದ ಬಾನ್ಸುರಿ, ವಾರ್ವಿಕ್ ವಿವಿಯಿಂದ ಬಿ.ಎ ಪದವಿ, ಲಂಡನ್ ಬಿಪಿಪಿ ಕಾಲೇಜಿನಲ್ಲಿ ಕಾನೂನು ಪದವಿ ಹಾಗೂ ಅಕ್ಸಫರ್ಡ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2007 ರಲ್ಲಿ ದಿಲ್ಲಿ ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಕೊಂಡಿದ್ದ ಅವರು, ಸುಪ್ರೀಂಕೋರ್ಟ್ನಲ್ಲಿ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿರಿಯರಿಗೆ ಧನ್ಯವಾದ ಸಲ್ಲಿಸಿದ ಬಾನ್ಸುರಿ
ಪಕ್ಷದಲ್ಲಿ ಜವಾಬ್ದಾರಿ ನೀಡಿದ ಹಿರಿಯರಿಗೆ ಬಾನ್ಸುರಿ ಸ್ವರಾಜ್ ಧನ್ಯವಾದ ಅರ್ಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಪ್ರಧಾನ (ಸಂಘಟನಾ) ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ದಿಲ್ಲಿ ರಾಜ್ಯ ಘಟಕದ ಅಧ್ಯಕ್ಷ ವಿರೇಂದ್ರ ಸಚ್ದೇವ್ ಅವರಿಗೆ ಧನ್ಯವಾದ ಅರ್ಪಿಸಿ, ಪಕ್ಷದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ವಿದೇಶಾಂಗ ಸಚಿವೆಯಾಗಿ ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್ ಅವರು, 2019ರಲ್ಲಿ ನಿಧನರಾಗಿದ್ದರು. 1977ರಲ್ಲಿ ಅವರು ಹರ್ಯಾಣದ ಅತ್ಯಂತ ಕಿರಿಯ ಕ್ಯಾಬಿನೆಟ್ ಸಚಿವೆಯೆಂಬ ಕೀರ್ತಿಗೆ ಪಾತ್ರರಾಗಿದ್ದರು. ಏಳು ಬಾರಿ ಸಂಸದರಾಗಿದ್ದ ಅವರು, ಅಲ್ಪಾವಧಿಗೆ ದಿಲ್ಲಿ ಸಿಎಂ ಆಗಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿದ್ದರು.
ಬಾನ್ಸುರಿ ಅವರ ತಂದೆ ಸ್ವರಾಜ್ ಕೌಶಾಲ್ ಅವರು ಸುಪ್ರೀಂಕೋರ್ಟ್ನ ಹಿರಿಯ ವಕೀಲ ಹಾಗೂ ಮಿಜೋರಾಂನ ಮಾಜಿ ರಾಜ್ಯಪಾಲರಾಗಿದ್ದಾರೆ.