ವೈಲ್ಡ್ ಕಾರ್ಡ್ ಮೂಲಕ ಸಿಂಗರ್ ಹನುಮಂತ ಬಿಗ್ ಬಾಸ್ ಎಂಟ್ರಿಕೊಟ್ಟಿದ್ದಾರೆ. ಅವರು ಎಂಟ್ರಿ ನೀಡಿದ ಬಳಿಕ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಜಗದೀಶ್ ಇದ್ದಾಗ ಮಾತು ಮಾತಿಗೂ ಜಗಳ ಮಾಡುತ್ತಿದ್ದ ಮನೆ ಮಂದಿ ಹನುಮಂತನ ಆಗಮನದಿಂದ ಫುಲ್ ಖುಷ್ ಆಗಿದ್ದಾರೆ. ಆತನ ಮಾತಿಗೆ ಮನೆ ಮಂದಿ ಸಖತ್ ಮಜಾ ಮಾಡ್ತಿದ್ದಾರೆ. ಹಳ್ಳಿಯಿಂದ ಬಂದ ಹನುಮಂತ ಸಿಟಿ ಮಂದಿಯ ಜೀವನ ಶೈಲಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಆತ ಪೆದ್ದು ಪೆದ್ದಾಗಿ ಆಡುವಾಗ ವೀಕ್ಷಕರಿಗೂ ನಗು ಬರುತ್ತಿದೆ. ಹನುಮಂತನಿಗೆ ಗೊತ್ತಿಲ್ಲದ ವಿಚಾರಗಳನ್ನು ಉಳಿದ ಮನೆ ಮಂದಿ ಹೇಳಿಕೊಡುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಎಂದು ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ. ಅದಕ್ಕಾಗಿ ಸಾಕಷ್ಟು ಕಷ್ಟ ಪಡುತ್ತಾರೆ. ಆದರೆ ಹನುಮಂತ ಸುಲಭವಾಗಿ ಕ್ಯಾಪ್ಟನ್ ಸ್ಥಾನಕ್ಕೆ ಏರಿದ್ದಾರೆ. ಹಂಗಾಮಿ ಕ್ಯಾಪ್ಟನ್ ಆದರೂ ಕೂಡ ಅವರಿಗೆ ವಿಶೇಷ ಸವಲತ್ತುಗಳು ಸಿಕ್ಕಿವೆ. ಕ್ಯಾಪ್ಟನ್ ರೂಮ್ನಲ್ಲಿ ಅವರು ಹಾಯಾಗಿ ಮಲಗಿದ್ದಾರೆ. ಮುಂದಿನ ವಾರದ ಕ್ಯಾಪ್ಟೆನ್ಸಿ ಟಾಸ್ಕ್ಗೆ ಯಾರು ಅರ್ಹರು ಎಂಬುದನ್ನು ತೀರ್ಮಾನಿಸುವ ಅಧಿಕಾರವೂ ಹನುಮಂತನಿಗೆ ನೀಡಲಾಗಿದೆ.
ಬಿಗ್ ಬಾಸ್ ಮನೆಗೆ ಬರ್ತಿದ್ದಂತೆ ಹನುಮಂತನಿಗೆ ಹಲವು ಜವಾಬ್ದಾರಿ ನೀಡಲಾಗಿದೆ. ಅದರಿಂದಾಗಿ ಅವರಿಗೆ ಸ್ವಲ್ಪ ಗಲಿಬಿಲಿ ಆಗಿದೆ. ‘ನಾನು ಕ್ಯಾಪ್ಟನ್ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ’ ಎಂದು ಅವರು ಹೇಳಿದ್ದಾರೆ. ಹಾಗೆಲ್ಲ ಮಾಡುವಂತಿಲ್ಲ ಎಂದು ಶಿಶಿರ್ ಅವರು ಹೇಳಿದ್ದಾರೆ. ಕ್ಯಾಪ್ಟನ್ ಆದ್ದರಿಂದ ಹಗಲು ಹೊತ್ತಿನಲ್ಲೇ ಮಲಗುತ್ತೇನೆ ಎಂದು ಹನುಮಂತ ಹೇಳಿದ್ದಾರೆ. ಹಾಗೆಲ್ಲ ಮಾಡುವಂತಿಲ್ಲ ಎಂದು ಇನ್ನುಳಿದವರು ಬುದ್ಧಿ ಹೇಳಿದ್ದಾರೆ.
ಸ್ವಿಮಿಂಗ್ ಪೂಲ್ನಲ್ಲಿಯೇ ಸ್ನಾನ ಮಾಡುತ್ತೇನೆ ಎಂದು ಹನುಮಂತ ನೀರಿಗೆ ಇಳಿಯುತ್ತಾರೆ. ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಸಬೇಕು ಎಂಬುದನ್ನು ಅವರಿಗೆ ಧನರಾಜ್ ಹೇಳಿಕೊಟ್ಟಿದ್ದಾರೆ. ಇಂಥ ಹಲವು ಸಂಗತಿಗಳಿಂದ ನಗು ಹರಡುತ್ತಿದೆ. ಹನುಮಂತ ಅವರ ಗ್ರಾಮೀಣ ಸೊಗಡಿನ ಭಾಷೆ ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದವರಾದ ಅವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸುತ್ತಿವೆ. ಒಟ್ನಲ್ಲಿ ಹನುಮಂತನ ಎಂಟ್ರಿ ಇಂದ ದೊಡ್ಮನೆಯಲ್ಲಿ ನಗು ಮೂಡಿದೆ.