ಇಸ್ರೇಲ್ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕರು ಒಬ್ಬರ ಹಿಂದೊಬ್ಬರಂತೆ ಹತ್ಯೆ ಗೀಡಾಗುತ್ತಿದ್ದಾರೆ. ಇದರಿಂದ ಹೆಜ್ಬುಲ್ಲಾ ನಾಯಕರಿಗೆ ಜೀವ ಭಯ ಶುರುವಾಗಿದೆ. ಇದೀಗ ಉಗ್ರಗಾಮಿ ಗುಂಪಿನ ಉಪ ಕಾರ್ಯದರ್ಶಿ ನಯಿಮ್ ಖಾಸಿಮ್ ಲೆಬನಾನ್ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾಗಲು ಈತ ಲೆಬನಾನ್ ಬಿಟ್ಟು ಇರಾನ್ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ನಾಯಕರ ಆದೇಶದ ಮೇರೆಗೆ ಖಾಸಿಮ್ ಇರಾನ್ ಸೇರಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲ್ ದಾಳಿಯಲ್ಲಿ ಹಸನ್ ನಸ್ರಲ್ಲಾ ಮತ್ತು ಹಶೆಮ್ ಸಫಿದೀನ್ ಸೇರಿದಂತೆ ಹಿಜ್ಬುಲ್ಲಾದ ಉನ್ನತ ನಾಯಕರು ಹತರಾಗಿದ್ದಾರೆ. ಇದೀಗ ನಯಿಮ್ ಖಾಸಿಮ್ ಇಸ್ರೇಲ್ ಸೇನೆಯ ಮುಂದಿನ ಗುರಿಯಾಗಿರಬಹುದು ಎನ್ನುವ ಕಾರಣಕ್ಕೆ ಆತ ಇರಾನ್ ನಲ್ಲಿ ತಲೆ ಮರೆಸಿಕೊಂಡಿದ್ದಾನೆ.
ಇರಾನ್ ಮೂಲಗಳನ್ನು ಉಲ್ಲೇಖಿಸಿ ದುಬೈ ಮೂಲದ ಮಾಧ್ಯಮ ಸಂಸ್ಥೆ ಎರಾಮ್ ನ್ಯೂಸ್ ತನ್ನ ವರದಿಯಲ್ಲಿ ಖಾಸಿಮ್ ಅಕ್ಟೋಬರ್ 5ರಂದು ಬೈರುತ್ ತೊರೆದಿದ್ದಾರೆ ಎಂದು ವರದಿ ಮಾಡಿದೆ. ಇರಾನ್ನ ವಿದೇಶಾಂಗ ಸಚಿವರ ವಿಮಾನದಲ್ಲಿ ಅವರನ್ನು ಕರೆದೊಯ್ಯಲಾಯಿತು. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಈ ತಿಂಗಳು ಲೆಬನಾನ್ಗೆ ರಾಜ್ಯ ಪ್ರವಾಸಕ್ಕೆ ಬಂದಿದ್ದರು. ಇಸ್ರೇಲ್ನಿಂದ ಹತ್ಯೆಯಾಗುವ ಭೀತಿಯಿಂದಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ನ ಉನ್ನತ ನಾಯಕರು ಖಾಸಿಮ್ನನ್ನು ಸ್ಥಳಾಂತರಿಸುವಂತೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ ನಂತರ ಖಾಸಿಮ್ ಮೂರು ಭಾಷಣಗಳನ್ನು ನೀಡಿದ್ದಾರೆ. ಎರಾಮ್ ನ್ಯೂಸ್ ಪ್ರಕಾರ, ಮೊದಲ ಭಾಷಣವನ್ನು ಬೈರುತ್ನಲ್ಲಿ ರೆಕಾರ್ಡ್ ಮಾಡಲಾಗಿದೆ. ಆದರೆ ಎರಡನೇ ಮತ್ತು ಮೂರನೇ ಭಾಷಣಗಳನ್ನು ಟೆಹ್ರಾನ್ನಲ್ಲಿ ಮಾಡಲಾಗಿದೆ. ಅಕ್ಟೋಬರ್ 15ರಂದು ಕದನ ವಿರಾಮವನ್ನು ತಲುಪುವವರೆಗೆ ಹಿಜ್ಬುಲ್ಲಾ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಖಾಸಿಮ್ ಇಸ್ರೇಲ್ ಗೆ ಎಚ್ಚರಿಕೆ ನೀಡಿದ್ದಾನೆ.