ಚೆನ್ನೈ: ಹಿಂದಿನ ಕಾಲದಲ್ಲಿ ಹಿರಿಯರು ನವ ದಂಪತಿಗಳಿಗೆ 16 ರೂಪದ ಸಂಪತ್ತನ್ನು ಹೊಂದುವಂತೆ ಆಶೀರ್ವದಿಸುತ್ತಿದ್ದರು. ಬಹುಶಃ ಈಗ 16 ರೂಪದ ಸಂಪತ್ತಿನ ಬದಲು 16 ಮಕ್ಕಳನ್ನು ಹೊಂದುವಂತೆ ಆಶೀರ್ವಾದ ನೀಡುವ ಸಮಯ ಬಂದಿದೆ ಎಂದು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ದಕ್ಷಿಣ ಭಾರತ ರಾಜ್ಯಗಳ ಜನರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಎಂದು ಕರೆ ನೀಡಿದ್ದರು. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗುವ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಹ ಜೇಳಿದ್ದರು. ಈ ಬೆನ್ನಲ್ಲೇ ತಮಿಳುನಾಡು ಸಿಎಂ ದಂಪತಿಗಳು ಹಚ್ಚೆಚ್ಚು ಮಕ್ಕಳನ್ನು ಹೊಂದುವಂತೆ ಕರೆ ನೀಡಿದ್ದಾರೆ.
ಚೆನ್ನೈನಲ್ಲಿ ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಆಯೋಜಿಸಿದ್ದ ಕಾರ್ಯಕ್ರಮದಲಿ 31 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿಸಿ ಅವರು ಮಾತನಾಡಿದರು. ತಮಿಳುನಾಡಿನಲ್ಲಿ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿ ಇರುವ ನಾಣ್ಣುಡಿ ಒಂದಿದೆ. ಹಿಂದೆ ನಮ್ಮ ಹಿರಿಯರೆಲ್ಲ 16 ವಿವಿಧ ಬಗೆಯ ಸಂಪತ್ತುಗಳನ್ನು ಹೊಂದಿರಬೇಕು ಎಂದು ಆಶೀರ್ವದಿಸುತ್ತಿದ್ದರು. ಈಗ 16 ಮಕ್ಕಳನ್ನು ಹೊಂದುವಂತೆ ಆಶೀರ್ವಾದ ಮಾಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಮುಂದುವರಿದು, ಇವತ್ತಿನ ಪರಿಸ್ಥಿತಿಯಲ್ಲಿ ದಕ್ಷಿಣ ಭಾರತದಲ್ಲಿ ಲೋಕಸಭಾ ಸ್ಥಾನಗಳು ಕುಸಿಯುತ್ತಿದೆ. ಹೀಗಾಗಿ ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ನಾವು ಏಕೆ ಕಡಿಮೆ ಮಕ್ಕಳನ್ನು ಹೊಂದಬೇಕು ಎಂದು ನಿರ್ಬಂಧ ಹಾಕಿಕೊಳ್ಳಬೇಕು? ನಾವೇಕೆ 16 ಮಕ್ಕಳನ್ನು ಹೊಂದುವ ಗುರಿ ಹಾಕಿಕೊಳ್ಳಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.