ಬಾಲಿವುಡ್ ನ ಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ಧರ್ಮ ಪ್ರೊಡಕ್ಷನ್ ಹೌಸ್ ಕೂಡ ಒಂದು. ಯಶ್ ಜೋಹರ್ ಸಹ ಸ್ಥಾಪಿಸಿದ್ದ ಧರ್ಮ ಪ್ರೊಡಕ್ಷನ್ಸ್ ಹೌಸ್ ಜವಬ್ದಾರಿಯನ್ನು ಕರಣ್ ಜೋಹರ್ ಹೊತ್ತಿಕಂಡಿದ್ದರು. ಈ ನಿರ್ಮಾಣ ಸಂಸ್ಥೆ ಮೂಲಕ ಹಲವು ಸಿನಿಮಾಗಳು ತೆರೆಕಂಡಿವೆ. ಅಲ್ಲದೆ ಹಲವು ಸ್ಟಾರ್ ನಟರನ್ನು ಈ ನಿರ್ಮಾಣ ಸಂಸ್ಥೆ ನೀಡಿದೆ. ಸುಮಾರು 45 ವರ್ಷಗಳ ಇತಿಹಾಸ ಇರುವ ಧರ್ಮ ಪ್ರೊಡಕ್ಷನ್ ಹೌಸ್ ಅನ್ನು ಇದೀಗ ಕರಣ್ ಜೋಹರ್ ಮಾರಾಟಕ್ಕಿದ್ದಾರೆ. ಭಾರತದ ಶ್ರೀಮಂತ ಉದ್ಯಮಿಯೊಬ್ಬರು ಖರೀದಿಗೆ ಮುಂದಾಗಿದ್ದಾರೆ.
ಧರ್ಮಾ ಪ್ರೊಡಕ್ಷನ್ ಅನ್ನು ಕರಣ್ ಜೊಹರ್ ಮಾರಾಟ ಮಾಡುತ್ತಿದ್ದು, ನಿರ್ಮಾಣ ಸಂಸ್ಥೆಯ 50% ಅಂದರೆ ಬರೋಬ್ಬರಿ ಅರ್ಧ ಭಾಗವನ್ನು ಸೀರಮ್ ಇನ್ಸ್ಟಿಟ್ಯೂಪ್ ಆಫ್ ಇಂಡಿಯಾದ ಸಿಇಓ ಆಗಿರುವ ಆಧಾರ್ ಪೂನಾವಾಲಾ ಖರೀದಿ ಮಾಡಲಿದ್ದಾರೆ. ಧರ್ಮಾ ಪ್ರೊಡಕ್ಷನ್ನ ಒಟ್ಟು ಮೌಲ್ಯ 2000 ಕೋಟಿ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ಅರ್ಧ ಭಾಗವನ್ನು 1000 ಕೋಟಿ ರೂಪಾಯಿ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ ಆಧಾರ್ ಪೂನಾವಾಲ. ಕೋವಿಡ್ ಸಮಯದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದರು ಆಧಾರ್ ಪೂನಾವಾಲ.
‘ನಾವು ಧರ್ಮಾ ಪ್ರೊಡಕ್ಷನ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಹೊಂದಿದ್ದೇವೆ’ ಎಂದು ಆಧಾರ್ ಪೂನಾವಾಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಧರ್ಮಾ ಪ್ರೊಡಕ್ಷನ್ನ ಬಾಕಿ ಅರ್ಧ ಭಾಗವನ್ನು ಕರಣ್ ಜೋಹರ್ ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ. ಮಾತ್ರವಲ್ಲದೆ ಧರ್ಮಾ ಪ್ರೊಡಕ್ಷನ್ ಸಂಸ್ಥೆಯ ಎಕ್ಸಿಕ್ಯೂಟಿವ್ ಚೇರ್ಮನ್ ಸ್ಥಾನ ಸಹ ಅವರ ಬಳಿಯೇ ಇರಲಿದೆ. ‘ಈ ಪಾಲುದಾರಿಕೆಯು ಅತ್ಯುತ್ತಮವಾಗಿದ್ದು, ಭಾವನಾತ್ಮಕ ಕಥೆ ಹೇಳುವ ಸಾಮರ್ಥ್ಯ ಮತ್ತು ವ್ಯವಹಾರ ತಂತ್ರಗಳ ಪರಿಪೂರ್ಣ ಮಿಶ್ರಣವನ್ನು ಪ್ರತಿನಿಧಿಸುತ್ತದೆ. ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾ ಆಧುನಿಕ ಶೈಲಿನ ಕತೆಗಳನ್ನು ಹೇಳುವ ಪ್ರಯತ್ನ ಮಾಡಲಿದ್ದೇವೆ’ ಎಂದು ಆಧಾರ್ ಪೂನಾವಾಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಧರ್ಮಾ ಪ್ರೊಡಕ್ಷನ್ ಅನ್ನು ಕರಣ್ ಜೋಹರ್ ತಂದೆ ಯಶ್ ಜೋಹರ್ 1974 ರಲ್ಲಿ ನಿರ್ಮಾಣ ಮಾಡಿದರು. 1980 ರಲ್ಲಿ ಬಿಡುಗಡೆ ಆದ ‘ದೋಸ್ತಾನ’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದ ಯಶ್ ಜೋಹರ್ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. 2004 ರಲ್ಲಿ ಯಶ್ ಜೋಹರ್ ನಿಧನ ಹೊಂದಿದ ಬಳಿಕ ಕರಣ್ ಜೋಹರ್ ಧರ್ಮಾ ಪ್ರೊಡಕ್ಷನ್ ಅನ್ನು ಮುಂದುವರೆಸಿಕೊಂಡು ಬರುತ್ತಿದ್ದರು. ಕರಣ್ ಸಹ ವೃತ್ತಿಪರತೆಯಿಂದಲೇ ಧರ್ಮಾ ಪ್ರೊಡಕ್ಷನ್ ಅನ್ನು ಬೆಳೆಸುತ್ತಿದ್ದರು. ಆದರೆ ಈಗ ನಿರ್ಮಾಣ ಸಂಸ್ಥೆಯ ಅರ್ಧ ಭಾಗವನ್ನು ಸೀರಮ್ ಇನ್ಸ್ಟಿಟ್ಯೂಟ್ಗೆ ಮಾರಾಟ ಮಾಡಿದ್ದಾರೆ. ಅಸಲಿಗೆ ಕರಣ್ ಬಳಿ ಧರ್ಮಾ ಪ್ರೊಡಕ್ಷನ್ನ 90.70 ಭಾಗವಷ್ಟೆ ಇತ್ತು, ಉಳಿದ 9.30 ಭಾಗ ಕರಣ್ರ ತಾಯಿ ಹೀರೂ ಜೋಹರ್ ಬಳಿ ಇತ್ತು. ಆದರೆ ಹೀರೂ ಜೋಹರ್ ತಮ್ಮ ಭಾಗವನ್ನು ಮಗನಿಗೆ ವರ್ಗಾವಣೆ ಮಾಡಿದ್ದಾರೆ.