ಕಿಚ್ಚ ಸುದೀಪ್ ತಾಯಿ ಸರೋಜ ಸಂಜೀವ್ ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸುದ್ದಿ ತಿಳಿದ ರಾಜಕೀಯ ಗಣ್ಯರು, ಸಿನಿಮಾ ರಂಗದ ನಟ, ನಟಿಯರು ಜೊತೆಗೆ ಅಭಿಮಾನಿಗಳು ಮನೆ ಮುಂದೆ ಹಾಜರಿದ್ದರು. ಈ ವೇಳೆ ಕೆಲವರು ನಡೆದುಕೊಂಡ ರೀತಿಗೆ ಸುದೀಪ್ ಪುತ್ರಿ ಸಾನ್ವಿ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವರು ನಿಜವಾಗಿಯೂ ಸಂತಾಪ ವ್ಯಕ್ತಪಡಿಸುವ ಉದ್ದೇಶದಿಂದ ಬಂದರೆ ಮತ್ತೆ ಕೆಲವರು ಅಲ್ಲಿಯೂ ತಮ್ಮ ಸ್ಟಾರ್ ಗಳನ್ನು ನೋಡಬಹುದು ಎಂಬ ಉದ್ದೇಶದಿಂದಲೇ ಬಂದರು. ಅದರಲ್ಲೂ ಸುದೀಪ್ ತಮ್ಮ ತಾಯಿಯ ಅಂತಿಮ ಯಾತ್ರೆಗಾಗಿ ಒಬ್ಬ ಮಗನಾಗಿ ಕೈಯಲ್ಲಿ ಮಡಕೆ ಹಿಡಿದು ಬಂದರೆ ಅವರನ್ನು ನೋಡಲೆಂದು ಸಾಕಷ್ಟು ಜನ ನೂಕು ನುಗ್ಗಲು ನಡೆಸಿದ್ದರು. ಇದು ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಸುದೀಪ್ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಪಕ್ಕಕ್ಕೆ ಹೋಗಿ ಎಂದು ಕಿರುಚಿದರು.
ಕೆಲವರು ಸುದೀಪ್ ರನ್ನು ಅಕ್ಷರಶಃ ತಳ್ಳುತ್ತಿದ್ದರು. ತನ್ನ ಅಮ್ಮನಿಗೆ ವಿದಾಯ ಹೇಳಲೂ ಬಿಡಲಿಲ್ಲ. ಇದು ಸಾನ್ವಿ ಸುದೀಪ್ ಸಿಟ್ಟಿಗೆ ಕಾರಣವಾಗಿದೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು ನನ್ನ ತಂದೆಗೆ ತನ್ನ ಅಮ್ಮನನ್ನು ಶಾಂತಿಯುತವಾಗಿ ಕಳುಹಿಸಿಕೊಡುವ ಅರ್ಹತೆಯೂ ಇರಲಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನನ್ನ ಅಜ್ಜಿಯನ್ನು ಕಳೆದುಕೊಂಡಿರುವುದಕ್ಕಿಂತಲೂ ನಮ್ಮ ಮನೆಯ ಮುಂದೆ ಜಮಾಯಿಸಿದ್ದ ಕೆಲವರು ಕಿರುಚಾಡುತ್ತಿದ್ದುದು, ಘೋಷಣೆ ಕೂಗುತ್ತಿದ್ದುದು, ಕ್ಯಾಮರಾಗಳನ್ನು ನಮ್ಮ ದುಃಖತಪ್ತ ಮುಖಗಳಿಗೆ ಫೋಕಸ್ ಮಾಡಲೆತ್ನಿಸುತ್ತಿದ್ದು ಎಲ್ಲಕ್ಕಿಂತ ಕೆಟ್ಟ ಅನುಭವವಾಗಿತ್ತು. ಇದಕ್ಕಿಂತಲೂ ಅಮಾನವೀಯವಾಗಿ ನಡೆದುಕೊಳ್ಳಲು ಸಾಧ್ಯವೇ ಎನಿಸಿತು. ನನ್ನ ತಂದೆ ಅವರ ತಾಯಿಗಾಗಿ ಅಳುತ್ತಿದ್ದರೆ, ಆಕೆಯನ್ನು ಶಾಂತಿಯುತವಾಗಿ ಕಳುಹಿಸಿಕೊಡಲು ಪ್ರಯತ್ನಿಸುತ್ತಿದ್ದರೆ ಅವರನ್ನು ತಳ್ಳುತ್ತಿದ್ದರು. ನಾನು ನನ್ನ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿದ್ದರೆ ಈ ಜನರು ಎಷ್ಟು ಒಳ್ಳೆಯ ರೀಲ್ಸ್ ಮಾಡಬಹುದು ಎಂದು ತಳ್ಳಾಡುತ್ತಿದ್ದರು’ ಎಂದು ಸಾನ್ವಿ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.