ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 31 ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಸೆಣಸುವ ಮೂಲಕ 2023ರ ಹೊಡಿ-ಬಡಿ ಟೂರ್ನಿಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.
ಈ ಮಹತ್ವದ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಅಂದಹಾಗೆ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಹೊಸದಾಗಿ ಎರಡು ತಂಡಗಳಿಗೆ ಅವಕಾಶ ನೀಡಲಾಗಿತ್ತು. ಅದರಂತೆ ಆಡಿದ ಮೊದಲ ಆವೃತ್ತಿಯಲ್ಲಿಯೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಐಪಿಎಲ್ ಇತಿಹಾಸದ ಬಗ್ಗೆ ಮಾತನಾಡುವುದಾದರೆ 2008ರಲ್ಲಿ ಮೊದಲ ಆವೃತ್ತಿ ಆರಂಭವಾಗಿತ್ತು. ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮೊದಲ ಚಾಂಪಿಯನ್ ತಂಡ ಎನಿಸಿಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ಆರ್ಆರ್ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು.
ಇದಾದ ಮುಂದಿನ ಆವೃತ್ತಿಯಲ್ಲಿ ಅಂದರೆ, 2009ರ ಐಪಿಎಲ್ ಟೂರ್ನಿಯಲ್ಲಿ ಡೆಕಾನ್ ಚಾರ್ಜರ್ಸ್(ಈಗಿನ ಸನ್ರೈಸರ್ಸ್ ಹೈದರಾಬಾದ್) ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದು ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.
ಇದಾದ ಬಳಿಕ ಐಪಿಎಲ್ ಟೂರ್ನಿಯು ವಿಶ್ವದ ಇತರೆ ಫ್ರಾಂಚೈಸಿ ಲೀಗ್ಗಳಿಗಿಂತಲೂ ಅತ್ಯಂತ ಶ್ರೀಮಂತ ಟೂರ್ನಿ ಎನಿಸಿಕೊಂಡಿತು. ಅಂದಿನಿಂದ ವರ್ಷದಿಂದ ವರ್ಷಕ್ಕೆ ಬಿಸಿಸಿಐ ಆದಾಯ ಏರಿಕೆಯಾಯಿತು ಹಾಗೂ ಆಟಗಾರರ ಮೌಲ್ಯ ಕೂಡ ಬೆಳೆಯುತ್ತಿದೆ. ಅಂದಹಾಗೆ ಒಟ್ಟು 15 ಬಾರಿ ಐಪಿಎಲ್ ಟೂರ್ನಿ ನಡೆದಿದೆ.
ಒಟ್ಟು ಐದು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಯುಶಸ್ವಿ ತಂಡವೆನಿಸಿಕೊಂಡಿದೆ. ನಾಲ್ಕು ಬಾರಿ ಚಾಂಪಿಯನ್ಸ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ (ಡೆಕಾನ್ ಚಾರ್ಜರ್ಸ್) ತಂಡಗಳು ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರೆ, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟನ್ಸ್ ತಂಡಗಳು ತಲಾ ಒಂದೊಂದು ಬರಿ ಚಾಂಪಿಯನ್ ಆಗಿವೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ತಂಡಗಳು ಇನ್ನೂ ಒಂದೇ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ, ಈ ಮೂರು ತಂಡಗಳು ಈ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿವೆ. ಇದರಲ್ಲಿ ಆರ್ಸಿಬಿ ಮೂರು ಬಾರಿ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಐಪಿಎಲ್ ವಿನ್ನರ್ಸ್ ಹಾಗೂ ರನ್ನರ್ಸ್ ತಂಡಗಳ ಪಟ್ಟಿ
ವರ್ಷ | ವಿಜೇತ ತಂಡ | ಜಯ | ರನ್ನರ್ ಅಪ್ | ಸ್ಥಳ |
2008 | ರಾಜಸ್ಥಾನ್ ರಾಯಲ್ಸ್ | 3 ವಿಕೆಟ್ | ಚೆನ್ನೈ ಸೂಪರ್ ಕಿಂಗ್ಸ್ | ಮುಂಬೈ |
2009 | ಡೆಕನ್ ಚಾರ್ಜರ್ಸ್( ಸನ್ರೈಸರ್ಸ್ ಹೈದರಾಬಾದ್) | 6 ರನ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಜೋಹಾನ್ಸ್ಬರ್ಗ್ |
2010 | ಚೆನ್ನೈ ಸೂಪರ್ ಕಿಂಗ್ಸ್ | 22 ರನ್ | ಮುಂಬೈ ಇಂಡಿಯನ್ಸ್ | ಮುಂಬೈ |
2011 | ಚೆನ್ನೈ ಸೂಪರ್ ಕಿಂಗ್ಸ್ | 58 ರನ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಚೆನ್ನೈ |
2012 | ಕೋಲ್ಕತಾ ನೈಟ್ ರೈಡರ್ಸ್ | 5 ವಿಕೆಟ್ | ಚೆನ್ನೈ ಸೂಪರ್ ಕಿಂಗ್ಸ್ | ಚೆನ್ನೈ |
2013 | ಮುಂಬೈ ಇಂಡಿಯನ್ಸ್ | 23 ರನ್ | ಚೆನ್ನೈ ಸೂಪರ್ ಕಿಂಗ್ಸ್ | ಕೋಲ್ಕತಾ |
2014 | ಕೋಲ್ಕತಾ ನೈಟ್ ರೈಡರ್ಸ್ | 3 ವಿಕೆಟ್ | ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) | ಬೆಂಗಳೂರು |
2015 | ಮುಂಬೈ ಇಂಡಿಯನ್ಸ್ | 41 ರನ್ | ಚೆನ್ನೈ ಸೂಪರ್ ಕಿಂಗ್ಸ್ | ಕೋಲ್ಕತಾ |
2016 | ಸನ್ರೈಸರ್ಸ್ ಹೈದರಾಬಾದ್ | 8 ರನ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಬೆಂಗಳೂರು |
2017 | ಮುಂಬೈ ಇಂಡಿಯನ್ಸ್ | 1 ರನ್ | ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ | ಹೈದರಾಬಾದ್ |
2018 | ಚೆನ್ನೈ ಸೂಪರ್ ಕಿಂಗ್ಸ್ | 8 ವಿಕೆಟ್ | ಸನ್ರೈಸರ್ಸ್ ಹೈದರಾಬಾದ್ | ಮುಂಬೈ |
2019 | ಮುಂಬೈ ಇಂಡಿಯನ್ಸ್ | 1 ರನ್ | ಚೆನ್ನೈ ಸೂಪರ್ ಕಿಂಗ್ಸ್ | ಹೈದರಾಬಾದ್ |
2020 | ಮುಂಬೈ ಇಂಡಿಯನ್ಸ್ | 5 ವಿಕೆಟ್ | ಡೆಲ್ಲಿ ಕ್ಯಾಪಿಟಲ್ಸ್ | ದುಬೈ |
2021 | ಚೆನ್ನೈ ಸೂಪರ್ ಕಿಂಗ್ಸ್ | 27 ರನ್ | ಕೋಲ್ಕತಾ ನೈಟ್ ರೈಡರ್ಸ್ | ದುಬೈ |
2022 | ಗುಜರಾತ್ ಟೈಟನ್ಸ್ | 7 ವಿಕೆಟ್ | ರಾಜಸ್ಥಾನ್ ರಾಯಲ್ಸ್ | ಅಹಮದಾಬಾದ್ |