ಬೆಂಗಳೂರು: ಚನ್ನಪಟ್ಟಣದಲ್ಲಿ ಟಿಕೆಟ್ ಅನೌನ್ಸ್ಗೂ ಮೊದಲೇ ಆಂತರಿಕ ಯುದ್ಧ ಆರಂಭವಾಗಿದೆ. ಮಾಜಿ ಸಚಿವ, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ. ಆ ಮೂಲಕ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೋದು ಪಕ್ಕಾ ಆಗಿದೆ.
ಹೌದು ರಾಜ್ಯ ರಾಜಕಾರಣದಲ್ಲಿ ಇಂದು ಅತಿ ದೊಡ್ಡ ಬೆಳವಣಿಗೆ ಆಗಿದ್ದು,
ಚನ್ನಪಟ್ಟಣ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯೆ ಎಲ್ಲಾ ಪಕ್ಷಗಳಿಗೂ ಕಗ್ಗಂಟಾಗಿ ಪರಿಣಮಿಸಿತ್ತು.ಇದೀಗ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಯೋಗೇಶ್ವರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಂಗಳವಾರ ತಡರಾತ್ರಿ ಎರಡು ಸಲ ಮನೆಯಿಂದ ರಹಸ್ಯ ಸ್ಥಳಕ್ಕೆ ಹೋಗಿ ಯೋಗೀಶ್ವರ್ ಚರ್ಚಿಸಿದ್ದರು. ಮಧ್ಯರಾತ್ರಿ ಖಾಸಗಿ ಹೊಟೇಲಿನಲ್ಲಿ ಡಿಕೆಶಿಯನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭೇಟಿ ವೇಳೆ ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ಪಕ್ಷ ಸೇರ್ಪಡೆಗೆ ಸಿಪಿವೈಗೆ ಡಿಕೆಶಿ ತಿಳಿಸಿದ್ದರು. ಅದರಂತೆ ಇಂದು ಬೆಳಗ್ಗೆಯೇ ಡಿಕೆಶಿ ನಿವಾಸಕ್ಕೆ ಯೋಗೀಶ್ವರ್ ತೆರಳಿದ್ದರು. ಸಿಪಿ ಯೋಗೇಶ್ವರ್ ಅವರನ್ನು ಜೆಡಿಎಸ್ನಿಂದಲೇ ಸ್ಪರ್ಧೆ ಮಾಡಿಸಲು ಬಿಜೆಪಿ ಮುಂದಾಗಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರ ಮೂಲಕ ಯೋಗೇಶ್ವರ್ ಮನವೊಲಿಕೆಗೆ ಜೆಡಿಎಸ್ ಸಹ ಕಸರತ್ತು ನಡೆಸಿತ್ತು.