ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್. ಸಿನಿಮಾ ರಂಗದ ಈ ಜೋಡಿ ಪ್ರತಿಯೊಬ್ಬರಿಗೂ ಮಾದರಿ. ರಾಧಿಕಾ ಪಂಡಿತ್ ಅವರು ಯಶ್ಗೆ ಸದಾ ಬೆಂಬಲವಾಗಿ ನಿಂತಿದ್ದಾರೆ. ಯಶ್ ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಸಮಯ ನೀಡುತ್ತಾರೆ. ಈಗ ರಾಧಿಕಾ ಪಂಡಿತ್ ಬಗ್ಗೆ ಯಶ್ ಮಾತನಾಡಿದ್ದು, ಪತ್ನಿಯನ್ನು ಬಾಯ್ತುಂಬ ಹೊಗಳಿದ್ದಾರೆ.
‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ರಾಧಿಕಾ ಬಗ್ಗೆಯೂ ಮಾತನಾಡಿದ್ದು, ‘ಅವರು ನನ್ನ ಶಕ್ತಿ’ ಎಂದಿದ್ದಾರೆ.
‘ರಾಧಿಕಾ ಸಿಕ್ಕಿದ್ದು ನನ್ನ ಅದೃಷ್ಟ. ಅವಳು ಯಾವಾಗಲೂ ನನ್ನ ಬೆಂಬಲಿಸಿದ್ದಾಳೆ. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಇಬ್ಬರೂ ಒಟ್ಟಾಗಿ ಬೆಳೆದವರು. ನಾವಿಬ್ಬರೂ ಗೆಳೆಯರಾಗಿ ಪರಿಚಯ ಆದವರು. ನಂತರ ಮದುವೆ ಆದೆವು. ನಾನು ಏನು ಎಂಜಾಯ್ ಮಾಡುತ್ತೇನೆ ಅನ್ನೋದು ಫ್ರೆಂಡ್ ಆಗಿ ಅವಳಿಗೆ ಗೊತ್ತು. ಈ ಚಿತ್ರದಿಂದ ಏನು ಸಿಗುತ್ತದೆ? ಎಷ್ಟು ಹಣ ಸಿಗುತ್ತದೆ ಎಂದು ಯಾವಾಗಲೂ ಕೇಳಿಲ್ಲ. ಇದು ಒಳ್ಳೆಯ ಆಯ್ಕೆಯೇ ಅಥವಾ ಕೆಟ್ಟ ಆಯ್ಕೆಯೇ ಎಂದು ಕೇಳಿಲ್ಲ. ನೀನು ಖುಷಿಯಾಗಿದ್ದೀಯಾ ಎಂದಷ್ಟೇ ಕೇಳುತ್ತಾಳೆ. ಅವಳು ಅಟೆಷನ್ಷನ್ ಹಾಗೂ ಸಮಯವನ್ನು ಮಾತ್ರ ಕೇಳುತ್ತಾಳೆ’ ಎಂದು ಯಶ್ ಹೇಳಿದ್ದಾರೆ.
ಯಶ್ ಮೊದಲಿನಿಂದಲೂ ತಮ್ಮ ಸಿನಿಮಾಗಳ ವಿಚಾರದಲ್ಲಿ ಬಹಳ ಚೂಸಿ ಆಗಿದ್ದಾರೆ. ನಿರ್ದೇಶಕರು ಬಂದು ಕಥೆ ಹೇಳಿದ ತಕ್ಷಣ ಒಪ್ಪಿ ಪ್ರತಿದಿನ ಚಿತ್ರೀಕರಣಕ್ಕೆ ಹೋಗಿ ಬರುವ ಆಸಾಮಿ ಅವರಲ್ಲ. ಒಂದು ಚಿತ್ರ ಉತ್ತಮವಾಗಿ ಮೂಡಿ ಬರಲು ಏನೆಲ್ಲಾ ಬೇಕೋ ಅದೆಲ್ಲವನ್ನು ಹೊಂದಿಸುವ ಪ್ರಯತ್ನ ಮಾಡುತ್ತಾರೆ. ಕಥೆಯ ವಿಚಾರದಲ್ಲಿ ಬಹಳ ಕೇರ್ ತೆಗೆದುಕೊಳ್ಳುತ್ತಾರೆ. ‘KGF’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲಲು ಯಶ್ ಕಾರಣ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಹಾಗೂ ಪ್ರಶಾಂತ್ ನೀಲ್ ಸಹ ಹೇಳಿದ್ದಾರೆ.
ಸಿನಿಮಾ ಕೆಲಸಗಳಲ್ಲಿ ಇಷ್ಟೆಲ್ಲಾ ಬ್ಯುಸಿಯಾಗಿರುವ ಯಶ್, ಫ್ಯಾಮಿಲಿಗೂ ಟೈಮ್ ಕೊಡುತ್ತಾರೆ. ಯಾವುದೇ ಮೀಟಿಂಗ್, ಶೂಟಿಂಗ್ ಎಂದು ಮನೆಯಿಂದ ಹೊರಗೆ ಇದ್ದರೂ ಆಗಾಗ್ಗೆ ಮನೆಗೆ ಭೇಟಿ ಕೊಟ್ಟು ಮಡದಿ ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ಫ್ಯಾಮಿಲಿ ಜೊತೆ ಹಬ್ಬ ಹರಿದಿನಗಳಲ್ಲಿ ಸಂಭ್ರಮಿಸುತ್ತಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ರಾಧಿಕಾ ಪಂಡಿತ್ ಆಗಾಗ್ಗೆ ಹಂಚಿಕೊಂಡಿದ್ದಾರೆ.