ಬೆಂಗಳೂರು: ಸಿಪಿವೈ ಕಾಂಗ್ರೆಸ್ ಸೇರ್ಪಡೆಗೊಂಡ ಬೆನ್ನಲ್ಲೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯನ್ನು ಜೆಡಿಎಸ್ ಕಣಕ್ಕೆ ಇಳಿಸಿದೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರ ಜೊತೆ ನಡೆಸಿದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ,
ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಕುಮಾರಸ್ವಾಮಿಯನ್ನ ಹೇಗಾದ್ರು ಮುಗಿಸಬೇಕು ಅಂತ ಇದೆ.ಚನ್ನಪಟ್ಟಣದ ಕಾರ್ಯಕರ್ತರು, ಜನರು ಇದಕ್ಕೆ ಉತ್ತರ ಕೊಡಬೇಕು. ನಾನೇ ಚನ್ನಪಟ್ಟಣಕ್ಕೆ ಬಂದು ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು. ಕುಮಾರಸ್ವಾಮಿ ತೆರವಾಗಿರುವ ಕ್ಷೇತ್ರಕ್ಕೆ ದೇವೇಗೌಡರ ಕುಟುಂಬದವರೇ ಅಭ್ಯರ್ಥಿ ಆಗಬೇಕು ಎಂದು ಕಾರ್ಯಕರ್ತರ ಒತ್ತಾಸೆಯಾಗಿತ್ತು.
ಅಷ್ಟೇ ಅಲ್ಲದೇ ನಿಖಿಲ್ ಅಭ್ಯರ್ಥಿ ಆಗದೇ ಹೋದರೆ ನಾವು ಚುನಾವಣೆ ನಡೆಸುವುದಿಲ್ಲ ಎಂಬ ಸಂದೇಶವನ್ನು ದಳಪತಿಗಳಿಗೆ ಚನ್ನಪಟ್ಟಣ ನಾಯಕರು ರವಾನೆ ಮಾಡಿದ್ದರು. ಈ ಕಾರಣಕ್ಕೆ ಅಂತಿಮವಾಗಿ ಕುಮಾರಸ್ವಾಮಿ ಅವರನ್ನೇ ಜೆಡಿಎಸ್ ಕಣಕ್ಕೆ ಇಳಿಸಿದೆ. ಸಭೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪ್ರಮುಖರು ಉಪಸ್ಥಿತರಿದ್ದರು. ನಿಖಿಲ್ ಆಯ್ಕೆ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಈ ಸಂದರ್ಭದಲ್ಲಿ ನಿಖಿಲ್ ಅವರನ್ನೇ ಕಣಕ್ಕೆ ಇಳಿಸುವಂತೆ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ನಿಖಿಲ್ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸಿದರು.