ರಷ್ಯಾದ ಕಜಾನ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸಭೆಗೆ ‘ಹೆಚ್ಚು ಮಹತ್ವ’ ದೊರೆತಿದೆ ಎಂದು ಚೀನಾ ಹೇಳಿದೆ.
ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಂಬಂಧಿಸಿ ಸಾಮಾನ್ಯ ವಿಚಾರಗಳ ಕುರಿತು ಉಭಯ ನಾಯಕರು ಒಪ್ಪಂದಕ್ಕೆ ಬಂದಿರುವ ಕಾರಣ ಈ ಸಭೆಗೆ ಮಹತ್ವ ಬಂದಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಲಿನ್ ಜಿಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮೋದಿ, ಷಿ ಮಾತುಕತೆಯನ್ನು ಚೀನಾ ಯಾವ ರೀತಿ ವಿಶ್ಲೇಷಿಸುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ, ‘ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಭಾರತದೊಂದಿಗೆ ತಾನು ಕೆಲಸ ಮಾಡಲು ಸಿದ್ಧ ಎಂಬ ತನ್ನ ನಿಲುವನ್ನು ಚೀನಾ ಮತ್ತೊಮ್ಮೆ ಸ್ಪಷ್ಟಪಡಿಸಿದೆ’ ಎಂದು ಉತ್ತರಿಸಿದರು.
‘ಪರಸ್ಪರರಲ್ಲಿ ವಿಶ್ವಾಸ ಹೆಚ್ಚಳ, ಸಂವಹನ ಮತ್ತು ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಚೀನಾ ಸಿದ್ಧವಿದೆ. ಭಾರತದೊಂದಿಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಂಡು ದ್ವಿಪಕ್ಷೀಯ ಸಂಬಂಧಗಳನ್ನು ಪುನಃ ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವುದಕ್ಕೂ ಸಿದ್ಧವಿದೆ’ ಎಂದರು.